Monday 3 December, 2007

ಲಘು ಬರಹ


ನಾನೂ ನನ್ನ ಬಾಸೂ
December 3, 2007
ನಾನು ಅಫೀಸಿಗೆ ತಲುಪುತ್ತಿದ್ದತೆ ನನ್ನ ಬಾಸ್ ಕಲ್ಲೂರಾಮ್ ದನಿ ಕೇಳಿಸಿತು. "ಚಂದ್ರೂ ನೋಡು ರಾವ್ ಈಗ್ಲಾದರೂ ಬಂದ್ರಾ?" ಚಂದ್ರೂ ಉತ್ತರಿಸೋದ್ರಲ್ಲಿ ನಾನು ಡೈರಿ ತೆಗೆದುಕೊಂಡು ಕಲ್ಲೂರಾಮರ ಇದಿರಿದ್ದೆ.
" ಏನ್ರೀ ರಾವ್ ಅವರೇ ನಿನ್ನೆ ಬೇಗ ಮನೆಗೆ ಹೋದಿರಂತೆ?? ಅಂದರೆ ಪ್ರಾಣಿ ಸಿಟ್ಟಲ್ಲಿಲ್ಲ!(ಇವರೂ ಸಹಸಿಟ್ಟಲ್ಲಿದ್ದಾಗ ಇದಿರಿನ ವ್ಯಕ್ತಿಗೆ ಏಕವಚನದ ಪ್ರಯೋಗ).
"ಯಾರು ಹೇಳಿದ್ದು ಸಾರ್ ತಮಗೆ" ನಾನೂ ಏರಿಸಿದೆ, ಬಾಸ್ ನ್ನು.
"ಯಾರೂ ಯಾಕೆ ಹೇಳಬೇಕು? ಏನು ಅದನ್ನೂ ನನ್ನ ಬಾಯಿಯಿಂದಲೇ ಹೊರಡಿಸ್ತೀರೇನು?" ಕಲ್ಲೂರಾಮ್ ಗಲಿಬಿಲಿಗೊಂಡನಾ ಹೇಗೆ?
"ಛೆ ಛೆ ಅದಕ್ಕಲ್ಲ ಸಾರ್ ನಾ ಹೇಳಿದ್ದು?"
" ನಿನ್ನೆ ನೀವು ಮನೆಗೆ ಹೋಗುವಾಗ ನಾಲ್ಕೂ ಐವತ್ತಾಗಿತ್ತು, ಅಂದರೆ ನೀವು ಹತ್ತು ನಿಮಿಷ ಮೊದಲು ಮನೆಗೆ ಹೋದ ಹಾಗೆ ಆಯ್ತಲ್ಲ?"
" ಆದ್ರೆ ನಾನು ಬೆಳಿಗ್ಗೆ ಹತ್ತು ನಿಮಿಷ ಮೊದಲು ಬಂದಿದ್ದೆನಲ್ಲ"
" ಅಂದರೆ" ಕಲ್ಲೂರಾಮ್ ಈಗ ನಿಜವಾಗಿಯೂ ಗಲಿಬಿಲಿಗೊಂಡಂತೆ ಕಂಡಿತು." ಸಾರ್ ನಾನು ನೋಡಿದ್ದೆ ಸಾರ್ ನೀವು ಆೞೀಸ್ ಗಡಿಯಾರಾನ ಹತ್ತು ನಿಮಿಷ ಮುಂದೆ ಇಟ್ಟದ್ದು, ಅದಕ್ಕೆ ಸಾಯಂಕಾಲ ಹತ್ತು ನಿಮಿಷ ಬೇಗ ಹೋದೆನಷ್ಟೆ, ಯಾಕೆ ಸಾರ್ ಹಾಗೆ ಮಾಡಿದಿರಿ?"
ನಾನು ಅವರ ಉತ್ತರಕ್ಕಾಗಿ ಕಾಯದೇ ನನ್ನ ರೂಮಿಗೆ ಹೋದೆ, ನನಗೆ ಗೊತ್ತು, ತನ್ನ ಈ ಪ್ರಯೋಗ ಫಲಪ್ರದವಾಗಿಲ್ಲ ಅಂತ ಗೊತ್ತಾದ ಮೇಲೆ ಬೇರೆ ಏನಾದರೂ ಯೋಚಿಸಲು ತೊಡಗಿರುತ್ತಾನೆ ಅಂತ.
ನನಗೆ ಕಲ್ಲೂರಾಮ್ ಬಹಳ ಇಷ್ಟದ ಹೆಸರು, ಅದಕ್ಕೆ ಬಾಸ್ ನ ಹೆಸರು ಏನೇ ಆಗಿರಲಿ ನಾನು ಕಲ್ಲೂರಾಮ್ ಅಂತೆಲೇ ಕರೆಯೋದು, ಈಗ ನೀವು ಫ್ಯಾಂಟಮ್ ಕಥೆಯಲ್ಲಿ ನೋಡಿಲ್ವಾ? ಅದರಲ್ಲಿ ಎಷ್ಟೇ ಜನರೇಷನ್ ಆದರೂ ಫ್ಯಾಂಟಮ್ ಹಾಗೇ ಇರುತ್ತಾನಲ್ಲ. ಹಾಗೆ ನನ್ನ ಎಷ್ಟು ಆೞೀಸು ಬದಲಾದರೂ , ಊರು ಬದಲಾದರೂ , ಬಾಸು ಬದಲಾದರೂ ಹೆಸರು ಇದೇ ಇರುತ್ತೆ.ಈ ಬಾಸುಗಳಿದ್ದರಲ್ಲಾ ಅವರು ತಮ್ಮ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಅಥವಾ ಅದಕ್ಕೇ ಅವರು ಬಾಸ್ ಆಗಿರ್ತಾರೋ ತಿಳಿಯದು.ಅವರು ಆ ಕೆಲ್ಸಕ್ಕೆ ಎಷ್ಟು ಫಿಟ್ ಅಗ್ತಾರೋ ತಿಳೀದು, ( ಇದನ್ನೇ ಒಬ್ಬರಿಗೆ ಹೇಳಿದಾಗ, ಅದು ನಿಮಗೆ ಗೊತ್ತಿದ್ದರೆ ನೀವು ಆ ಸ್ಥಾನದಲ್ಲಿ ಇರುತ್ತಿದ್ದಿರಿ ಅಂದರು) ಏನಾದ್ರೂ ನನಗೆ ಈ ತರಹ ಬಾಸ್ ಆಗಲು ಇಷ್ಟವಿಲ್ಲ, ಬಿಡಿ. ಇಲ್ಲಿ ನಾನು ಆಫೀಸಿನ ಬಾಸ್ ನ ಅನೇಕ ಉಪಾಯಗಳನ್ನೂ ನನ್ನ ಗುರು ತಿರುಮಂತ್ರಗಳನ್ನೂ ಕೊಟ್ಟಿದ್ದೇನೆ, ಆದರೆ ಇದನ್ನು ಉಪಯೋಗಿಸುವುದೋ,ಸುಮ್ಮನೇ ನಕ್ಕು ಬಿಡುವುದೋ ನಿಮಗೇ ಬಿಟ್ಟದ್ದು, ಯಾಕೆಂದರೆ ಇದಕ್ಕೆ ಕಾಪಿ ರೈಟ್ ಇಲ್ಲ, ಇದೇ ಉಪಾಯ ನಿಮಗೆ ಸಕ್ಸಸ್ ಅಗುತ್ತೆಂಬ ಭರವಸೆ... ನೋಡಿ.. ಆಮೇಲೆ ನನ್ನನ್ನು ಬೈಯ್ಯ ಬೇಡಿ. ದೇಶ ಕಾಲಗನುಗುಣವಾಗಿ ಬಾಸೂ ಅವರವರ ಬುದ್ದಿವಂತಿಕೆಯ ಸ್ತರಗಳೂ ಬದಲಾಗುತ್ತಿರುತ್ತವೆ ಹಾಗೂ ಉಪಾಯಗಳೂ ಮತ್ತು ಅದರ ೞಲಿತಾಂಶಗಳೂ.
ಒಮ್ಮೆ ಹೀಗಾಯ್ತು,ನನ್ನ ಬಾಸ್ ಕಲ್ಲೂರಾಮ್ ನನ್ನ ಕರೆದು,"ರಾವ್ ಅವರೇ ನನಗೊಂದು ಇಮಿಡಿಯಟ್ ಆಗಿ ಗ್ರೀಟಿನ್ಗ್ ಕಾರ್ಡ್ ಡಿಸೈನ್ ಬೇಕು ಆೞೀಸಿನ ಪರವಾಗಿ" ಎಂದರು. ನಾನು ಎರಡು ದಿನ ಮುತುವರ್ಜಿ ವಹಿಸಿ ನಮ್ಮ ಇತ್ತೀಚೆಗಿನ ಸುಂದರ ಕಟ್ಟೋಣಗಳ ಫೋಟೋ ಹಾಕಿ ಸ್ವತಹಾ ನಾಲ್ಕು ಡಿಸೈನ್ ಮಾಡಿ ಬಾಸ್ ಗೆ ಕೊಟ್ಟೆ. "ಗುಡ್ ಗುಡ್ ತುಂಬ ಚೆನ್ನಾಗಿ ಮಾಡಿದಿರಿ,ಬೇರೆಯವರಿಗೆ ತೋರಿಸೋದು ಬೇಡ ಇದು ಸೀಕ್ರೆಟ್ ಹಾರ್ಡ್ ಮತ್ತು ಸಾೞ್ಟ್ ಕಾಪಿ ನನಗೇ ಕೊಡಿ" ಎಂದ ಬಾಸು ಎಲ್ಲವನ್ನೂ ತೆಗೆದುಕೊಂಡಿತು. ಆದರೆ ಒಂದು ವಾರದ ಮೇಲೆ ತಿಳಿದದ್ದು ಕಲ್ಲೂರಾಮ್ ಅದನ್ನು ತಾನೇ ಮಾಡಿದೆ ಅಂತ ಹೇಳಿ ಕ್ರೆಡಿಟ್ ಎಲ್ಲಾ ತಾನೇ ತೆಗೆದುಕೊಂಡಿದ್ದ.ಇನ್ನೊಂದು ಸಾರಿ ಪ್ರೊಜೆಕ್ಟ್ ವರ್ಕೊಂದನ್ನು ಸಹಾ ಹೀಗೇ ಮಾಡಿ ತಾನೇ ದೊಡ್ಡವರೆದುರು ಶಹಬಾಷೀ ಗಿಟ್ಟಿಸಿಕೊಂಡಿದ್ದರು.ಇದರಲ್ಲಿ ನನಗೆ ದಕ್ಕಿದ್ದು ಪ್ರೋಜೆಕ್ಟ್ ನ ಹೆಸರಲ್ಲಿ ಹದಿನೈದು ದಿನಗಳ ರಜೆಯಷ್ಟೇ.

ಇನ್ನೊಂದ್ಸಲ ಆೞೀಸಿನ ಎಕ್ಸಿಕ್ಯೂಟಿವ್ ಎಲ್ಲರೂ ಯಾವುದೋ ಸೈಟಿನ ಸಮಸ್ಯೆ ಬಗೆ ಹರಿಸಲುಹೋಗಿದ್ದೆವು.ನಮ್ಮೆಲ್ಲರ ಬಾಸ್ ಕಲ್ಲೂರಾಮ್ ಆದರೂ ಆ ಗುಂಪಿನಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿ ಟೋಪಿಯೂ ಇಟ್ಟುಕೊಂಡಿರೋದ್ರಿಂದ ಎದ್ದು ಕಾಣುತ್ತಿದ್ದೆ.ಹಳ್ಳಿಯವರೆಲ್ಲರೂ ನನ್ನನ್ನೇ ಮುತ್ತಿಕೊಂಡರು. ಲೋಕಲ್ ಭಾಷೆ ನನ್ನಗೆ ಸರಿಯಾಗಿ ಬರುತ್ತಿರುವುದೂ ನನ್ನ ಬಾಸ್ ಗೆ ಸರಿಯಾಗಿ ಅರ್ಥ ಆಗದಿರುವುದೂ ಇದಕ್ಕೆ ಇಂಬು ಕೊಟ್ಟಿತು, ಸಮಸ್ಯೆ ಬಗೆ ಹರಿದು ನಾವೆಲ್ಲರೂ ಆೞೀಸಿಗೆ ಬಂದ ಕೆಲವು ಸಮಯದವರೆಗೆ ಬಾಸ್ ನ ಮನಸ್ಸಿನಲ್ಲಿ ಕುಟುಕುತ್ತಿತ್ತು. ತಡೆಯಲಾರದೇ ಕೇಳಿಯೇ ಬಿಟ್ಟರು.
ಕಲ್ಲೂರಾಮ್: ರಾವ್ ಅವರೇ ಯಾಕೆ ಊರವರೆಲ್ಲರೂ ನಿಮಗೇ ಜಾಸ್ತಿ ಗೊಉರವ ಕೊಟ್ಟರು?
ನಾನು : ಹಾಗೇನಿಲ್ಲ ಸಾರ್,ನಿಮ್ಮ ಹಾಗೆ ನಾನೂ ಅವರನ್ನೆಲ್ಲ ನೋಡುವುದು ಇದೇ ಮೊದಲಲ್ವಾ, ಅಲ್ಲದೇ ಇಲ್ಲಿಗೆ ನಾನು ಹೊಸಬ
ಬೇರೆ.
ಕಲ್ಲೂರಾಮ್: ನಿಮ್ಮ ಡ್ರೆಸ್ ನೋಡಿ ನೀವೇ ಬಾಸ್ ಎಂದು ಕೊಂಡರೋ ಹೇಗೆ?
ನಾನು: ( ಮನದಲ್ಲೇ ಅಲ್ಲವೇ ಮತ್ತೆ ಅಂದುಕೊಂಡೆನಾದರೂ) ಇರಲಿಕ್ಕಿಲ್ಲ ಸಾರ್ ನಿಮ್ಮ ಡ್ರೆಸ್ ನನ್ನದಕ್ಕಿಂತ
ಬೆಲೆಬಾಳುವಂತಹದ್ದೇ ಅಲ್ಲವಾ ಸಾರ್
ನನ್ನ ಈಮಾತಿನಿಂದ ಕಲ್ಲೂರಾಮ್ ಪ್ರಸನ್ನರಾದಂತೆ ಕಂಡು ಬಂತು ಆದರೂ...
ಕಲ್ಲೂರಾಮ್: ರಾವ್ ಅವರೇ ಇನ್ನೊಮ್ಮೆ ಹೋಗಬೇಕಾದಲ್ಲಿ ನೀವು ನನ್ನಲ್ಲಿ ಕೇಳಿ, ಡ್ರೆಸ್ ಕೋಡ್ ನಾನು ಸೆಲೆಕ್ಟ್ ಮಾಡ್ತೇನೆ, ನಿಮ್ಮ
ಅವಶ್ಯಕಥೆಯಿದ್ದರೆ ಮಾತ್ರ ಕರೆದು ಕೊಂಡು ಹೋಗ್ತೇನೆ,ನೀವು ಆೞೀಸಿನ ಕೆಲ್ಸನೋಡಿಕೊಂಡರೆ ಸಾಕು.
ನಾನು : ಸಾರ್ ಮತ್ತೆ ಪ್ರೊಜೆಕ್ಟ್ ರಿಪೋರ್ಟ್ ಸಿದ್ಧಪಡಿಸಬೇಕಾದಲ್ಲಿ ಸೈಟ್ಗೆ ಹೋಗಲೇ ಬೇಕಲ್ಲಾ?
ಕಲ್ಲೂರಾಮ್: ಅದೆಲ್ಲಾ ನಾನು ನೋಡಿಕೊಳ್ತೇನೆ.
ನನ್ನ ಬಾಸ್ ನ ಮನದಿಂಗಿತ ಅರ್ಥವಾಯ್ತು. ಇಷ್ಟರವರೆಗೆ ಎಲ್ಲಾ ಪ್ರೊಜೆಕ್ಟಗಳಲ್ಲೂ ನನ್ನನ್ನು ಸೇರಿಸಿಕೊಳ್ಳುತ್ತಿದ್ದ ಕಲ್ಲೂರಾಮ್ ಈಸಾರಿ ನನ್ನನ್ನು ಸೇರಿಸಿಕೊಳ್ಳಲೇ ಇಲ್ಲ. ನನಗೆ ಒಪ್ಪದೇ ವಿಧಿಯಿರಲಿಲ್ಲವಲ್ಲ. ಅಂತೂ ಪ್ರೊಜೆcಟ್ ರೆಪೋರ್ಟ್ ಸಿದ್ಧಗೊಂಡಿತ್ತು, ಕಲ್ಲೂರಾಮ್ ರಿಂದ ಬಹಳ ಶ್ರಮವಹಿಸಿ, ಆದರೆ ದೊಡ್ಡ ಬಾಸ್ ಗೆ ತೋರಿಸುವಾಗ ಮಾತ್ರ ಎಡವಟ್ಟಾಯ್ತು.
ನಮ್ಮ ಈ ಪ್ರೊಜೆಕ್ಟ್ ಬರುವ ಜಾಗದಲ್ಲಿ, ನೆಲದಡಿಯಿಂದ ಮೊದಲಿಂದಲೇ ಹೈ ಟೆನ್ಷನ್ ಕೇಬಲ್ ಹಾದು ಹೋಗುತ್ತಿದ್ದು, ಅದ್ನ್ನು ಬದಿಗೆ ಸರಿಸುವದಾಗಲೀ, ತೆಗೆಯಲಾಗಲೀ ಸಾಧ್ಯವಿಲ್ಲವಾಗಿತ್ತು. ಈ ಕೇಬಲ್ ಗಳಿಗೆ ಸಾಕಷ್ಟು ಸುರಕ್ಷೆ ವದಗಿಸಿಯೇ ನಾವುನಮ್ಮ ಕೆಲಸ ಮಾಡಬೇಕಾಗಿತ್ತು.ಕಲ್ಲೂರಾಮ ಇದರ ಪ್ಲಾನ್ ಏನೋ ಸರಿಯಾಗಿಯೇ ಮಾಡಿದ್ದರು,ಈ ಕೇಬಲ್ಲಿನ ಸುರಕ್ಷೆಗಾಗಿ ಆರ್ ಸಿ ಸಿ ಹ್ಯೂಮ್ ಪೈಪಗಳನ್ನು ಅಳವಡಿಸಲು ಸೂಚನೆ ನೀಡಿದ್ದರು, ಇದರಿಂದ ಮೇಲಿನ ಪೇವ್ ಮೆಂಟ್ ಗೇನೂ ಧಕ್ಕೆ ಬರಲ್ಲ,ಕೇಬಲ್ಲೂ ಸೇೞಾಗೇ ಇರತ್ತೆ ಅಂತ. ಮೊದಲು ನನ್ನನ್ನು ಈ ಪ್ರೊಜೆಕ್ಟ್ ಗೆ ಸೇರಿಸಿಕೊಂಡಿರಲಿಲ್ಲವಲ್ಲ.ತೋರಿಸುತ್ತಿದ್ದಾಗ ದೊಡ್ಡ ಸಾಹೇಬರು ಕೇಳಿದರು" ಮಿ ಕಲ್ಲೂರಾಮ್ ಈ ಕೇಬಲ್ಲುಗಳು ಮೊದಲೇ ನೆಲದಡಿಯಲ್ಲಿ ಹಾಕಿರುವಾಗ ನೀವು ಅವುಗಳನ್ನು ಈ ನಿಮ್ಮ ಪೈಪಿನೊಳಕ್ಕೆ ಹೇಗೆ ತೂರಿಸುತ್ತೀರಿ?" ಬಿತ್ತು ಬಾಂಬ್.ಕಲ್ಲೂರಾಮ ಇದನ್ನು ಈ ದಿಸೆಯಲ್ಲಿ ಪ್ಲಾನ್ ಮಾಡುವಾಗ ಯೋಚಿಸಿರಲಿಲ್ಲ.ಮೈಲಾನುಗಟ್ಟಲೆ ಹರಡಿರುವ ಕೇಬಲ್ಲನ್ನು ಹೊರತೆಗೆದು ಈ ಪೈಪಿನೊಳಗೆ ತೂರಿಸಲು ಈಗ ಸಾಧ್ಯವಿಲ್ಲವಲ್ಲ.ಇನ್ನು ಹೇಗೆ ನಡೆದೀತು ಕಾರ್ಯ? ಅವರು ಕಕ್ಕಾಬಿಕ್ಕಿಯಾಗಿ ನಿರುತ್ತರರಾದರು.ಅವರು ಉತ್ತರಿಸದಿದ್ದುದನ್ನು ಕಂಡು " ಯಾರ್ರೀ ಮಾಡಿರೋದು ಈ ಪ್ರೋಜೆಕ್ಟ್? ನೀವೇ ತಾನೇ? ಎಂದು ಜೋರಾಗಿ ಕೇಳಿದಾಗ ಇವರು "ಅಲ್ಲ ಸಾರ್, ರಾವ್ ಅವರೇ ಮಾಡಿದ್ದು"ಎಂದು ಬಿಟ್ಟರು. ಸರಿ ನನಗೆ ಕರೆ ಬಂತು.ನಾನು ಬಂದ ಕೂಡಲೇ ದೊಡ್ಡ ಬಾಸ್ ಕೂಲಾಗಿ ನನ್ನ ಕೇಳಿದರು " ರಾವ್ ಅವರೇ ಇದರಲ್ಲಿ ಆರ್ ಸಿ ಸಿ ಪೈಪ್ ಅಳವಡಿಸಲು ಸೂಚನೆ ನೀಡಿದ್ದಿರಲ್ಲಾ? ಮೊದಲೇ ನೆಲದಡಿಯಲ್ಲಿ ಇದ್ದ ಈ ಕೇಬಲ್ಲುಗಳನ್ನು ಪೈಪಿನೊಳಕ್ಕೆ ಈಗ ಹೇಗೆ ತೂರಿಸುವಿರಿ?". ನಾನು ನಿರೀಕ್ಷಿಸದೇ ಬಂದ ಈ ಪ್ರಶ್ನೆಗೆ ಆ ಕ್ಷಣಕ್ಕೆ ನನ್ನಲ್ಲಿರಲಿಲ್ಲ,ಅವರೇ ಪುನಃ ಕೇಳಿದರು "ನೀವೇ ತಾನೇ ಪ್ರೊಜೆಕ್ಟ್ ಸಿದ್ಧ ಪಡಿಸಿದವರು?" ನಾನು ಕಲ್ಲೂರಾಮ್ ಮುಖ ನೋಡಿದೆ, ಅಲ್ಲಿ , ವಿಚಲಿತೆಯಿತ್ತು,ದೈನ್ಯತೆಯಿತ್ತು,ಅಳುಕಿತ್ತು, "ಹೊಉದು ಸಾರ್ "ಎಂದೆ ಧೈರ್ಯದಿಂದ ಮುಂದುವರೆಸಿದೆ" ಸ್ವಲ್ಪ ಇರಿ ಸಾರ್ ನನಗೆ ಯೋಚಿಸಲು ಸ್ವಲ್ಪ ಸಮಯ ಕೊಡಿ, ನನ್ನ ಮನಸ್ಸೆಲ್ಲ ಬೇರೆ ಪ್ರೊಜೆಕ್ಟನಲ್ಲಿದೆ"
"ಸರಿ ತಗೊಳ್ಳಿ ಐದು ನಿಮಿಷ, ಟೀ ಬ್ರೇಕ್" ಎಂದರು.
ಕಲ್ಲೂರಾಮ ರಿಗೆ ನನ್ನಲ್ಲಿ ಭರವಸೆಯಿತ್ತು, ಇಂತಹ ಪರಿಸ್ಥಿತಿಯನ್ನು ಹೇಗಾದರೂ ಬಗೆಹರಿಸುವೆ ಅಂತ.ಟೀ ಮುಗಿಯಿತು.ಎಲ್ಲರೂ ಬಂದ ಮೇಲೆ ನಾನೆಂದೆ" ಸಾರ್ ಇದು ಸಣ್ಣ ಪ್ರಿಂಟ್ ಮಿಸ್ಟೇಕ್ ಅಷ್ಟೇ, ಅಲ್ಲಿ ಪೂರ್ತಿ ರೊಉಂಡ್ ಪೈಪೆ ಅಲ್ಲ ಸಾರ್ ಅರ್ಧ ರೊಉಂಡ್ ಪೈಪು (ಪೈಪನ್ನು ಉದ್ದಕ್ಕೆ ಸರಿಯಾಗಿ ಅರ್ಧ ಮಾಡಿದರೆ)ಅಂತ ಆಗಬೇಕಿತ್ತು" ಎಂದೆ. "ಅಂದರೆ ..." ಸಾಹೇಬರಿಗೆ ಇನ್ನೂ ಸಂಶಯ"ಸಾರ್ ಕೇಬಲಾ ಇದ್ದ ಜಾಗ ಅಗೆದ್ದು ಕೆಳಗಡೆ ಕಾಂಕ್ರೀಟ್ ಹಾಕಿ ಅದರ ಮೇಳೆ ಈ ಹಾಫ್ ಪೈಪುಗಳನ್ನು ಲೇ ಮಾಡಬೇಕು ಸಾರ್, ಈ ಪೈಪುಗಳಲ್ಲಿ ಕೇಬಲ್ಲುಗಳನ್ನು ಇಟ್ಟು ಪುನಃ ಇನ್ನೊಂದು ಅರ್ಧ ಪೈಪು ಅದರ ಮೇಳೆ ಮುಚ್ಚಿದಂತೆ ಇಡಬೇಕು ಸಾರ್, ಮೇಲಿನ ಮಣ್ಣಿನ ಮತ್ತು ಪೇವ್ ಮೆಂಟನ ಭಾರ ಈ ಪೈಪು ತಡೆದು ಕೊಳ್ತದೆ ಸಾರ್" ಎಂದೆ ಮಧ್ಯ ಬಾಯಿ ಹಾಕಿ ಕಲ್ಲೂರಾಮ್"ಅಲ್ಲ ರಾವ್ ಅವರೇ , ಇದರ ಬದಲು ಚಾನಲ್ ಮಾಡಿದ್ದರೆ? ಸರಿ ಹೋಗುತ್ತಿತ್ತಲ್ಲ? " ಅಂದರೆ ಇದರ ಅರ್ಥ ನೋಡಿ, ತಾವೇ ಎಲ್ಲಾ ಮಾಡಿ ಈಗ ಅರ್ಥವಾಗಲಿಲ್ಲ ಎಂದರೆ? ಅದಕ್ಕೂ ನನ್ನಲ್ಲಿ ತಿರುಮಂತ್ರವಿತ್ತು." ಇಲ್ಲ ಸಾರ್ ಚನಲ್ ನಲ್ಲಿ ಎರಡು ಕೊರತೆಗಳಿವೆ ಉರುಟು ಪೈಪಿಗೆ ಹೋಲಿಸಿದರೆ ಅದು ಕಡಿಮೆ ಬಲವುಳ್ಳದ್ದು, ಇನ್ನೊಂದು ಈ ಪ್ರೊಜೆಕ್ಟ್ ನಲ್ಲಿ ಸಮಯ ಬಹು ಮುಖ್ಯ ಸಾರ್, ಪೈಪಾದರೆ ಬೇಗ ಅಳವಡಿಸಬಹುದು, ಅಲ್ಲದೇ ಕಳೆದ ಪ್ರೊಜೆಕ್ಟ್ ನಲ್ಲಿ ಉಳಿದ ಪೈಪುಗಳನ್ನು ಇಲ್ಲಿ ಉಪಯೋಗಿಸಿದರೆ ನಮಗೆ ಸಾಕಷ್ಟು ಲಾಭವಿದೆ" ದೊಡ್ಡ ಸಾಹೇಬರು ಎಷ್ಟು ಸಂತಸ ಪಟ್ಟರೆಂದರೆ ಈ ಪ್ರೊಜೆಕ್ಟ್ ನನಗೇ ಸಿಕ್ಕಿತು.
ಇನ್ನೊಂದು ಸಾರಿ ಎರಡು ದಿನ ನಾನು ಅೞೀಸಿಗೆ ಹೋಗಲೇ ಇಲ್ಲ,ಆ ಮೇಲೆ ನಾನು ಮೆಡಿಕಲ್ ಸರ್ಟಿೞಿಕೇಟಿನೊಂದಿಗೆ ಆೞೀಸಿಗೆ ಹಾಜರಾದೆ.
ಕಲ್ಲೂರಾಮ್: ರಾವ್ ನೀವು ರಜೆಯಲ್ಲಿದ್ದುದು ಸರಿ, ಆದರೆ ಹೋಗುವ ಮೊದಲು ನನಗೊಂದು ಮಾತು ಹೇಳಬಹುದಿತ್ತಲ್ಲ?, ಆೞೀಸಿನಲ್ಲಿ ತುಂಬಾನೇ ಕೆಲಸವಿತ್ತಲ್ಲ!
ನಾನು:( ಹೇಳಿದ್ದರೆ ನೀವು ರಜೆ ಕೊಡುತ್ತಿದ್ದುದು ಹೊಉದಾ?)ಹೇಳಿಯೇ ಹೋಗಿದ್ದೆ ಸಾರ್! ಅಲ್ಲದೇ ನನ್ನ ಆರೋಗ್ಯ ಸರಿಯಿರಲಿಲ್ಲ.
ಕಲ್ಲೂರಾಮ್: ಏನಾಗಿತ್ತು ? ಅಂದ ಹಾಗೆ ಯಾರಿಗೆ ಹೇಳಿ ಹೋದಿರಿ ನೀವು?
ನಾನು: ನನಗೆ ತುಂಬಾ ತಲೆ ನೋವು, ಹೊಟ್ಟೆ ನೋವು ಬಂದಿತ್ತು ಸರ್, ಹೇಳಲು ನೀವು ಹತ್ತಿರದಲ್ಲೆಲ್ಲೂ ಕಾಣಲಿಲ್ಲ, ಅದಕ್ಕೆ ಕನ್ಯಾಲಗೆ ಹೇಳಿ ಹೋಗಿದ್ದೆ ಸಾರ್.
ಕಲ್ಲೂರಾಮ್:ಯಾರ್ರೀ ಕನ್ಯಾಲ್? ನಿಮ್ಮ ಬಾಸಾ ಆತ?, ನಾನೇನು ೞಾರಿನ್ನಿಗೆ ಹೋಗಿದ್ದೆನಾ? ನಾನು ಬರುವವರೆಗೆ ಕಾಯಬೇಕಿತ್ತು!
ನಾನು:ಆ ದಿನ ನೀವು ಬರುವುದು ಡೊಉಟು ಅಂತ ಹೇಳಿದ್ದ ಸಾರ್ ಚಂದ್ರೂ, ಯಾಕೆಂದರೆ ಆ ದಿನ ಕ್ರಿಕೆಟ್ ಮ್ಯಾಚ್ ಇತ್ತಲ್ಲ ಸಾರ್.( ಇದು ರಾಮ ಬಾಣ, ಎಂದೂ ತಪ್ಪಿಲ್ಲ)
ಕಲ್ಲೂರಾಮ್: ಸರಿ ಸರಿ ನೀವಿನ್ನ ಹೋಗಿ.(ಅಷ್ಟರಲ್ಲಿ ಅವರ ಕೈಗೆ ನನ್ನ ಮೆಡಿಕಲ್ ರಿಪೋರ್ಟ್ ಸಿಕ್ಕಿತಂತ ಕಾಣ್ಸತ್ತೆ.) ತಡೀರಿ, ನಿಲ್ಲಿ ನೀವು ತಲೆ ನೋವು ಅಂದಿದ್ದಿರಿ ಡಾಕ್ಟರ್ ಇದರಲ್ಲಿ ಜ್ವರ ಅಂತ ಬರೆದಿದ್ದರಲ್ಲಾ.
ನಾನು: ಅದಕ್ಕೆ ನಾನೇನು ಮಾಡಬೇಕು ಸಾರ್.ನಾನು ನನಗಾದದ್ದು ಹೇಳಿದ್ದೆ, ಡಾಕ್ಟರು ನನ್ನ ಚೆಕ್ ಮಾಡಿ, ತಾನೇ ಬರೆದದ್ದು.
ಕಲ್ಲೂರಾಮ್: ಅದು ಹೇಗ್ರೀ ಆಗುತ್ತೆ, ನಿಮಗೇನಾಗಿದೆ ಅಂತ ನಿಮಗೇ ಗೊತ್ತಾಗೊಲ್ಲ ಅಂದ್ರೆ ಹೇಗ್ರೀ?
ನಾನು: ಏನ್ ಮಾತೂಂತ ಆಡ್ತೀರಾ ಸಾರ್, ನಮಗೇ ಎಲ್ಲಾ ಗೊತ್ತಾಗೋದಾದರೆ ಡಾಕ್ಟರ್ ಯಾಕೆ, ಈ ಆಸ್ಪತ್ರೆ,ಎಲ್ಲಾ ಯಾಕೆ ? ಈ ಜಗತ್ತಿನಲ್ಲಿ ಹೀಗೆ ಮಾಡೋದ್ದರಿಂದಲೇ ಐವತ್ತೈದು ಪ್ರತಿಶತ ಮನುಷ್ಯರು ರೋಗಿಗಳಾದ್ದಾರೆ ಸಾರ್ ಗೊತ್ತಾ... (ಇನ್ನು ಕಲ್ಲೂರಾಮ್ ನನ್ನನ್ನು ಇಲ್ಲಿ ನಿಲಗೊಡುವುದಿಲ್ಲವೆಂದು ಗೊತ್ತು ನನಗೆ.)
ಕಲ್ಲೂರಾಮ್: ಸರಿ ಸರಿ ನೀವಿನ್ನು ಹೋಗಿ.
( ಮುನ್ದುವರಿಯುವುದು)
ಬೆಳ್ಳಾಲ ಗೋಪಿನಾಥ ರಾವ್