Sunday 28 August, 2011

ವಾಕ್ಪಥ (vakpatha): ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ವಾಕ್ಪಥ (vakpatha): ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ


ವಾಕ್ಪಥ ೬ ೨೧.೦೮.೨೦೧೧


ಬೆಳ್ಳಾಲ ಗೋಪೀನಾಥ ರಾವ್ ಅವರ ಭಾಷಣದ ಸಾರಾಂಶ.


ನಮ್ಮಲ್ಲಿ ಎಲ್ಲರೂ ನಾಯಕರಲ್ಲ. ಆದರೆ ಎಲ್ಲರಲ್ಲಿಯೂ ನಾಯಕರಾಗುವ, ಎಲ್ಲದರಲ್ಲಿಯೂ ಗೆಲುವು ಸಾಧಿಸಬೇಕೆನ್ನುವ ಅಧಮ್ಯ ಆಸೆ ಆಕಾಂಕ್ಷೆಗಳಿರುತ್ತವೆ. ಹಾಗಾದರೆ ಕೆಲವರೇ ನಾಯಕರಾಗುವುದೇಕೆ?, ಅಥವಾ ನಾವು ಎಲ್ಲದರಲ್ಲಿಯೂ ಗೆಲುವು ಸಾಧಿಸಲಾರೆವು ಏಕೆ ?

ಗೆಳೆಯರೇ ಬನ್ನಿ. ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯಬಹುದಾದಂತಹ ಗುಣಗಳು ನಮ್ಮಲ್ಲಿ ಅಂತರ್ಗತವಾಗಿವೆ. ಅವುಗಳನ್ನು ನಾವು ನಮ್ಮ ಒತ್ತಡ, ಸಿಟ್ಟು ಸೆಡಕು, ಹಮ್ಮು ಬಿಗುಮಾನಗಳಿಂದಾಗಿ ಅಂತರ್ಯದಲ್ಲೇ ಅದುಮಿಟ್ಟುಕೊಂಡಿದ್ದೇವೆ. ಅವುಗಳನ್ನು ಹೊತೆಗೆದರೆ ಖಂಡಿತಾ ನಾವು ನಮ್ಮ ಪ್ರತಿ ಕಾರ್ಯದಲ್ಲಿಯೂ ಗೆಲುವು ಸಾಧಿಸ ಬಲ್ಲೆವು.
ಅವು ಯಾವುವು ಈಗ ನೋಡೋಣ.

ಹನ್ನೊಂದು ನಮ್ಮಲ್ಲಿನ ಅಂತರ್ಗತ ಶಕ್ತಿಗಳು ಹೀಗಿವೆ.


೧. ಕಾಮನ್ ಸೆನ್ಸ್: ತಾರ್ಕಿಕ ಆಲೋಚನೆ, ಒಂದು ಸಮಸ್ಯೆಯ ಪರಿಹಾರವನ್ನು ಗುರುತಿಸುವುದಕ್ಕಾಗಿ ಸಮಸ್ಯೆಯನ್ನು ಯಾವ ಕಡೆಯಿಂದ ಎದುರಿಸಬೇಕೆನ್ನುವುದೇ ಕಾಮನ್ ಸೆನ್ಸ್. ನಮ್ಮನ್ನು ಪ್ರಾಣಿಗಳಿಂದ ಭಿನ್ನವಾಗಿ ಮಾಡಿರುವುದೇನು? ನಮ್ಮ ಕೈ ಬೆರಳುಗಳು. ಕೈಗಳಿಂದಲೇ ಆಯುಧಗಳ ಸಹಾಯದಿಂದ ಕೂಡಾ ಬೇಟೆಯಾಡಬಹುದೆಂದು ಗ್ರಹಿಸಿದ ಕಾಮನ್ ಸೆನ್ಸ್ ನಿಂದ. ಅಲ್ಲಿಂದಲೇ ಮಾನವನ ಚಕ್ರಗಳಿಂದ ಮಂಗಳ ಲೋಕದವರೆಗಿನ ಯಾನವು ಆರಂಭವಾಗಿದ್ದು.

೨. ಪಾಜಿಟಿವ್ ಥಿಂಕಿಂಗ್: ವಾಸ್ತವವಾದ ರೂಢಿಗತ ಆಲೋಚನೆ. ನಿಮಗೆ ಒಂದು ಸಂದರ್ಶನಕ್ಕಾಗಿ ಮೆಜಿಸ್ಟಿಕ್ ನಿಂದ ಜಿಗಣಿಗೆ ಹೋಗಬೇಕಾಗಿದೆಯೆಂದುಕೊಳ್ಳಿ. ನಿಮ್ಮ ಆಲೋಚನೆಯೆಲ್ಲವೂ ಅಲ್ಲಿನ ಸಂದರ್ಶನಕ್ಕೆ ಕೇಳಬಹುದಾದ ಪ್ರಶ್ನೆಗಳಲ್ಲಿ ಅಥವಾ ಅಲ್ಲಿನ ಮುಂದಾಗಬಹುದಾದ ಫಲಿತಾಂಶದ ಆಲೋಚನೆಯಲ್ಲಿರುತ್ತೆಯೇ ವಿನಹಾ, ಅಲ್ಲಿಗೆ ತಲುಪುವಾಗ ಆಗಬಹುದಾದಂತಹ ಬೇರೆ ಆಕಸ್ಮಿಕಗಳ ಬಗೆಗೆ ಅಲ್ಲ. ವಾಸ್ತವವಾಗಿ ನಮ್ಮ ಸಂದರ್ಶನದ ಉತ್ತೀರ್ಣ ಅನುತ್ತೀರ್ಣತೆಗಳಷ್ಟೇ ನಡುವೆ ಸಂಭವಿಸಬಹುದಾದ ಆಕಸ್ಮಿಕಗಳ ಪಾಲೂ ಇರುತ್ತವೆಯಾದರೂ ಅದನ್ನು ನಾವು ಗಮನಿಸುವುದೇ ಇಲ್ಲ, ಅಂದರೆ ನಮಗೆ ನಮ್ಮ ಮೇಲಿನ ನಂಬಿಕೆಗಿಂತಲೂ ವಾಹನದ ಚಾಲಕನ ಮೇಲಿನ ನಂಬುಗೆಯೇ ಜಾಸ್ತಿಯಾಯಿತಲ್ಲ!!. ನಾವು ವಾಸ್ತವ ವಾಗಿ ರೂಢಿಗತ ಆಲೋಚನೆಯನ್ನೂ ಸೇರಿಸಿ ಆಲೋಚಿಸಿದರೆ ನಮಗೆ ಬರಬಹುದಾದ ಟೆನ್ಷನ್ ನಿಂದ ಮುಕ್ತಿ ಕಾಣಬಹುದು ನಮ್ಮ ಮೇಲಿನ ನಂಬುಗೆ ನಮಗೆ ಜಾಸ್ತಿಯಾಗಿ.

೩. ಏಕಾಗ್ರತೆ: ಮೆದುಳು ಒಂದು ಜನ ನಿಬಿಡ ಹೆದ್ದಾರಿಯಂತೆ , ಅದರಲ್ಲಿ ಸೈಕಲ್ ನಿಂದ ಹಿಡಿದು ಸಾಮಾನು ತುಂಬಿದ ಲಾರಿಯ ವರೆಗೆ ಹೋಲಿಸ ಬಲ್ಲಂತಹಾ ಆಲೋಚನೆಗಳು ದೊಡ್ದ ಶಬ್ದ ದೊಂದಿಗೆ ಅತ್ತಿತ್ತ ಪ್ರಯಾಣ ಮಾಡುತ್ತಿರುತ್ತವೆ. ಲೆಕ್ಕದ ತರಗತಿ ಮುಗಿದ ಕೂಡಲೇ ವಿಜ್ಞಾನ ವಿಷಯಕ್ಕೆ ಸನ್ನದ್ಧನಾಗಿರುವ ವಿಧ್ಯಾರ್ಥಿಯಂತೆ ನಮ್ಮ ಮನಸ್ಸಿನಲ್ಲೂ ಪ್ರತಿಯೊಂದೂ ವಿಷಯದ ಬಗೆಗೆ ಜೀವನದಲ್ಲಿ ಕಂಪಾರ್ಟಮೆಂಟಲೈಜೇಶನ್ ಮಾಡಿಟ್ಟುಕೊಳ್ಳಬೇಕು, ಇದನ್ನೇ ಕಲಿತುಕೊಳ್ಳಬೇಕಾಗಿರುವುದು.

೪. ಮಟ್ಟ ಸಾಮರ್ಥ್ಯ: ಗೊರ್ಬಚೇವ್, ವಿನೋದ್ ಕಾಂಬ್ಳಿ, ಧೀರೂಬಾಯ್ ಅಂಬಾನಿ, ಮೈಕೇಲ್ ಕಾಕ್ಸನ್, ಮತ್ತು ರಾಜೀವ್ ಗಾಂಧಿ, ಸೈಫ್ ಆಲಿಖಾನ್, ಅಜಯ ಜಡೇಜಾ ಇವರಿಬ್ಬರಲ್ಲಿ ವ್ಯತ್ಯಾಸ ಏನು ಗೊತ್ತಾ?
ಎರಡನೆಯವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ ಸ್ವ ಸಾಮರ್ಥ್ಯದಿಂದ ತಮ್ಮ ಮಟ್ಟ ಕಾಯ್ದುಕೊಂಡರೆ ಇನ್ನುಳಿದವರು ತನ್ನ ಸ್ವ ಸಾಮರ್ಥ್ಯದಿಂದಲೇ ಈಗಿನ ಮಟ್ಟಕೆ ಏರಿದವರು. ನಿರಂತರ ಪರಿಶ್ರಮದಿಂದಲೇ ಇವು ಸಾಧ್ಯ.ಅದಕ್ಕೇ ನಾವು ನಮ್ಮ ಮಟ್ಟ ಮತ್ತು ಸಾಮರ್ಥ್ಯವನ್ನು ಗೃಹಿಸಿಯೇ ನಮ್ಮ ಮುಂದಿನ ದಾರಿಯನ್ನೂ ಕಂಡುಕೊಂಡು ಕೃಮಿಸಬೇಕು.

೫. ಕನಸುಗಳು ಕನಸುಗಳೇ ಆದರೆ ಅವನ್ನು ನೆಸಸು ಮಾಡಬೇಕಾದರೆ ನಮ್ಮ ಗುರಿಯನ್ನು ಕಂಡು ಕೊಂಡು ಅದರತ್ತ ಸಾಗುವುದಕ್ಕೆ ನಮ್ಮ ಚಿಕ್ಕಂದಿನ ಓದಿದ ಕಥೆಗಳು ಕಥೆಗಳು ನಾವು ನೋಡುವ ಸಿನೇಮಾ ಮುಂತಾದವುಗಳು ನಮ್ಮಲ್ಲಿ ಪ್ರೇರಣೆಯಾಗಿಸಿಕೊಂಡು ಮುಂದುವರಿಯಬಹುದು.

೬. ನಾಯಕತ್ವದ ಲಕ್ಷಣಗಳು: ನಾನಿಲ್ಲಿ ಹೇಳುತ್ತಿರುವುದು ಗಾಂಧಿ ಸಾಯಿಬಾಬಾ ರಂತವರ ಎಲ್ಲರನ್ನೂ ಅನುಯಾಯಿ ಮಾಡಿಸಿಕೊಂಡಂತಹ ನಾಯಕತ್ವದ ಬಗೆಗಲ್ಲ. ಬದಲು ನಮ್ಮ ನಾಲ್ಕು ಜನ್ಬ ಸ್ನೇಹಿತರಲ್ಲಿಯೇ ಒಬ್ಬ ನಾಯಕನಿರುವನು, ನಮಗೆ ಇಷ್ಟವಿಲ್ಲದಿದ್ದರೂ ಅವನ ಇಷ್ಟದ ಸಿನೇಮಾಕ್ಕೆ ಅವನೊಂದಿಗೆ ಹೋಗುತ್ತೇವೆ, ಇನ್ನೊಮ್ಮೆ ನಿಮಗಿಷ್ಟವಾದ ಸಿನೇಮಾಕೆ ಅವನನ್ನು ಕೊಂಡು ಹೋಗುವ ಕ್ಷಮತ್ವ ನಿಮ್ಮಲ್ಲಿರಬೇಕು. ನಾಯಕನಾದವನಿಗೆ ಸಡಿಲ ಹಿಡಿತ ಎರಡೂ ಲಕ್ಷಣಗಳಿರಬೇಕು.

೭. ಪ್ರೇರಣೆ: ಪ್ರಮುಖ ವ್ಯಕ್ತಿಗಳ ಜೀವನಾ ವಿಧಾನದಿಂದ ನಾವು ಪ್ರೇರಣೆ ಹೊಂದ ಬೇಕು, ಅವರನ್ನೇ ದೇವರಂತೆ ಪೂಜಿಸುವುದಲ್ಲ. ಅವರಲ್ಲಿನ ಒಳ್ಳೆಯ ಅಂಶಗಳನ್ನೇ ತೆಗೆದುಕೊಂಡು ಅವರು ಮಾಡಿದ ತಪ್ಪನ್ನು ನಮಗೆ ಪಾಠವಾಗಿರಿಸಿಕೊಂಡು ನಮ್ಮ ಬದುಕಿನಲ್ಲಿ ಸೋಪಾನ ನಿರ್ಮಿಸಿಕೊಳಬೇಕು.

೮. ಅಂತರ್ಮುಖಲೋಚನೆ: ನಾವು ಯಾವ ಕ್ಷೇತ್ರದಲ್ಲಿ ಅಭಿವ್ರದ್ಧಿ ಸಾಧಿಸಬಲ್ಲೆವೋ ನಮ್ಮ ಲ್ಲಿಯ ಆಶಕ್ತಿಯನ್ನು ಸಾಧ್ಯವಾದಷ್ಟೂ ಬೇಗ ತಿಳಿದು ಕೊಳುವುದೇ ಅಂತರ್ಮುಖಾಲೋಚನೆ.

೯. ಭಾಷೆ, ಸಂಭಾಷಣೆ: ಮನುಷ್ಯರಿಗೆ ಪ್ರಾಣಿಗಳಿಗೆ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಭಾಷೆಯಾದರೆ ಮನುಷ್ಯರನ್ನೂ ಶ್ರೇಷ್ಠರನ್ನು ಬೇರ್ಪಡಿಸುವುದು ಸಂಭಾಷಣೆ ಭಾಷೆಯ ಮೇಲಿನ ಅಧಿಕಾರ.

೧೦. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು:

೧೧. ಶ್ರೇಷ್ಠತೆಯನ್ನು ಗುರುತಿಸುವುದು:

Wednesday 13 July, 2011

ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ

ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ




ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ.

ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು.

"ಏನಮ್ಮಾ ಎಲ್ಲಿ ರಾಯ?"
"ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ ಹೊಸ ಸೈಕಲ್ ತಂದಿದ್ದಾರೆ.  ಅದನ್ನೇ ಕಲೀತಿದ್ದಾರೆ".
ಪಕ್ಕದಲ್ಲೇ ಬಾಂಬ್ ಬಿದ್ದಹಾಗೆ ಆಯ್ತು !!!.


ನಾನೂ ಅವನೂ ಒಮ್ಮೆ ಮನೆಯಿಂದ ಕದ್ದು ಶಂಕರನಾರಾಯಣಕ್ಕೆ ಯಕ್ಷಗಾನಕ್ಕೆಂತ ಹೋಗಿದ್ದೆವು ಸೈಕಲ್ಲಿನಲ್ಲಿ.
ಬೆಳಿಗ್ಗೆ ಐರ್ಬೈಲ್ ಉಬ್ಬಿನ ಮೇಲೆ ಬರುವಾಗ ಕೇಳಿದೆ" ಅಲ್ಲ ಸೀನಾ ಆ ಹಾಸ್ಯಗಾರನ ಅಸ್ಥಿಪಂಜರದ ಡ್ಯಾನ್ಸ್ ಎಷ್ಟು ಚಂದ ಇತ್ತು ಅಲ್ವಾ?" ಹಿಂದಿನಿಂದ ಉತ್ತರ ಬರಲಿಲ್ಲ. ಎದೆ ಧಸಕ್ಕೆಂದಿತು. ಹಿಂದೆ ನಿದ್ದೆ ಕಣ್ಣಿನಲ್ಲಿಕುಳಿತಿರಬೇಕಾದ ಪ್ರಾಣಿ ಪತ್ತೆಯಿಲ್ಲ.
ಶೇಶಿಯ ಗಲಾಟೆ ಕೇಳುವರಾರು?( ಅವಳ ಮಗನಿಲ್ಲದೇ ಮನೆಗೆ ಹೋದರೆ!!).
ಸೈಕಲ್ ಹಿಂದಕ್ಕೆ ತಿರುಗಿಸಿ ಹುಡುಕುತ್ತಾ ಹೊರಟೆ .
ಉಬ್ಬಿನ ಕೆಳಗಡೆ ಉಬ್ಬು ಶುರುವಾಗುವಲ್ಲಿ ಪಕ್ಕದ ತೋಡಿನ (ಸಣ್ಣ ತೊರೆ)ಹೊಂಡದಲ್ಲಿ ಕೌಚಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ ಪ್ರಾಣಿ.
ಎಬ್ಬಿಸಿದರೆ "ಹೀಗೇ ನಿಧಾನ ಬಿಡು" ಕಾಮೆಂಟ್ ಬೇರೆ.
ಆಗ ನಾವೆಲ್ಲಾ ಅವನಿಗೆ ಕಲಿಸಲು ಹೊರಟು ನಮ್ಮ ನಾಲ್ಕೈದು ಜನರ ಸೈಕಲ್ ಬರ್ಬಾದ್ ಮಾಡಿಕೊಂಡು ಮನೆಯವರ ಕೈಲಿ .... ತಿಂದಾಗಿತ್ತು,  ಅದು ಹಳೆ ವಿಷಯ.


ಈಗ..
ನಾನು ಏನನ್ನೋ ಹೇಳಲು ಬಾಯಿ ತೆರೆಯೋದ್ರಲ್ಲಿ ಸಾಲು ಮರದ ಉಬ್ಬಿನಿಂದ ಬಹಳ ಸ್ಪೀಡಿನಲ್ಲಿ ಬರುತ್ತಿರುವ ಸೀನ ಕಾಣೀಸಿದ
" ಏಯ್ ಗೇರ್  ಸೈಕಲ್ಲು ಬಿಟ್ಟೀದ್ದೀಯಾ?........." ಆತನು ಇನ್ನೂ ಏನೋ ಹೇಳುತ್ತಾ ನನ್ನಿಂದ ಒಮ್ಮೆಲೇ ಪಾಸಾಗಿ ಬಿಟ್ಟ.
ನಾನೂ ಆತ ಹೋದ ದಿಕ್ಕಿನಲ್ಲೇ ಲಗು ಬಗೆಯಿಂದ ಹೊರಟೆ.
ಅನತಿದೂರ ತಲುಪುವದರೊಳಗೆ ಪುನ ಅಷ್ಟೇ ಸ್ಪೀಡಿನಿಂದ ವಾಪಾಸ್ಸು ನನ್ನ ಕಡೆ ಬರುತ್ತಿದ್ದನಾತ. 
" ಏಯ್ ಗೇರ್  ಸೈಕಲ್ಲು ಬಿಟ್ಟೀದ್ದೀಯಾ?......"   ಪುನಹ  ಅದೇಸ್ಟೈಲು,    ಏನ್ಮಹಾ ಇವನಿಗೊಬ್ಬನ್ಗೇನಾ ಗೇರ್ ಸೈಕಲ್ಲು ಅನ್ನಿಸಿತ್ತು.  
ಆಗಲೇ ಧಡ್ ಅಂತ್ ಶಬ್ದ ಕೇಳಿಸಿತು.    
ಓಡಿದೆ ಅತ್ತಲೆ..........!!
ಸ್ವಲ್ಪ ದೂರದಲ್ಲೇ ಧರಾಶಾಹಿಯಾದ ಪರಿಸರಪ್ರೇಮಿಯನ್ನು ಕಂಡೆ.
ಪಕ್ಕದ ತೋಡಿನಲ್ಲಿ ಆತನ ಸೈಕಲ್!!! ಅದೂ ಭೂಮಿಗೀತ ಹಾಡುತ್ತಿತ್ತು.

ಆತನೆಂದ " ಏಯ್ ಗೇರ್ ಸೈಕಲ್ ಬಿಟ್ಟಿದ್ದೀಯಾ? ಇದನ್ನ ಹೇಗೆ ಬಿಡೋದೂ? ಅಂತ ನಾನು ಕೇಳಿದ್ದು......"
ಈತ    ಬದಲಾಗುತ್ತಾನಾ?
....ಮಿಲಿಯನ್ ಡಾಲರ್ ಪ್ರಶ್ನೆ..!!!

ನನ್ನ ಇತಿಹಾಸದ ಕ್ಲಾಸ್............ಮರ.. ಕೆಸುವಿನ ಪತ್ರೊಡೆ ಮತ್ತು ಸೀನ

ನನ್ನ ಇತಿಹಾಸದ ಕ್ಲಾಸ್............ಮರ.. ಕೆಸುವಿನ ಪತ್ರೊಡೆ ಮತ್ತು ಸೀನ




ಹ್ಞಾ ಎಲ್ಲಿಯವರೆಗೆ ಓದಿದ್ದೆವು...?"
ಕಾರಂತರ ಕ್ಲಾಸ್ ನಲ್ಲಿ  ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.
ಎರಡನೇ ಕ್ಲಾಸ್ ಫೈಲ್ ಸಾರ್........................!!!
ಮೊದಲನೇ ಪದವಿ ಪೂರ್ವ  ರಸಾಯನ ಶಾಸ್ತ್ರದ ತರಗತಿ ಅದು.
ಈ ಉತ್ತರ ಬಂದರೆ ಹೇಗಾಗಿರಬೇಡ." ನೀವು ಈಗಾಗಲೇ ಊಹಿಸಿರಬಹುದು ಈ ಉತ್ತರ ಸೀನನಿಂದ ಮಾತ್ರ ಬಂದಿರಬಹುದು.....  ಅಂತ,      
ನೂರಕ್ಕೆ ನೂರು ಸರಿ ನಿಮ್ಮ ಊಹೆ.    .............ಕಾರಣ...

" ಥರ್ಮಾಸ್ ಫ್ಲಾಸ್ಕ್..... ನಿನ್ನೆ ನಾವು ಇದರಬಗ್ಗೆ ಕಲಿತುಕೊಂಡಿದ್ದೆವು, ಮನೆಯಲ್ಲಿ ಕಾಫಿ ಟೀ, ಹಾಲು ಮುಂತಾದವುಗಳನ್ನು ತುಂಬಾ ಹೊತ್ತಿನ ವರೆಗೆ ಬಿಸಿಯಾಗಿಡಲು, ಅಥವಾ ಕೆಡದೇ ಇಡಲು ಇದನ್ನ ಉಪಯೋಗಿಸುತ್ತೇವೆ"
ಈಗ ಒಂದು ಕೈ ಮೇಲೆ ಬಂತು.
ಎದ್ದು ನಿಲ್ಲಿ... ಏನು ಹೆಸರು??
ಸೀನ"
"ಗೊತ್ತಿದೆಯಲ್ಲಾ............?..
"ಜಾಸ್ತಿ ಹೊತ್ತು  ಉಳಿಲಿಲ್ಲ,  ಮೇಲಿಂದ ಕೆಳಗೆ ಬಿತ್ತು , ಒಡೆದೋಯ್ತು."
ಆದರೆ ಸೀನಾ, ಸ್ವಲ್ಪದರಲ್ಲಿ ಹಾಗೆಲ್ಲಾ ಫ್ಲಾಸ್ಕ್ ಒಡೆಯೋಲ್ಲವಲ್ಲ?
ಫ್ಲಾಸ್ಕ್ ಅಲ್ಲ , ಒಡೆದದ್ದು ..............ಹಾಲು"
ಮೂಲೆಯಿಂದ ಶುರುವಾದ ನಗೆಯ ಅಲೆಯೊಂದು ಇಡೀ ಕ್ಲಾಸ್ ಹರಡಿತು.
" ಸರಿ ಸರಿ  ...ಕೂತ್ಕೋ ಕೆಳಕ್ಕೆ..." ಪುನಹ ನಗು.
"ಕೆಳಗೆ ಅಂದ್ರೆ ನೆಲದಲ್ಲಿ ಅಲ್ಲಾ  ಸ್ಟುಪಿಡ್.......         ಬೆಂಚಿನ ಮೇಲೆ..."
 "ಹಾಗೇ ಮಾಂಸವನ್ನು ಹೆಚ್ಚು ಕೆಡದೇ ಇಡಬೇಕಾದರೆ ಅದನ್ನು ಶೀತಲೀಕರಣ ಮಾಡಬೇಕು ಅಂದರೆ, ನಾವು     ಹೆಚ್ಚು    ಸಮಯ ಕೆಡದೇ ಇಡಬಹುದು, ಸಾಮಾನ್ಯವಾಗಿ ಹೆಚ್ಚೆಂದರೆ................" ..
ಸೀನನ ನೋಟ ಬೆರೆಯುತ್ತಲೇ, ಎದ್ದು ನಿಂತ ಸೀನ
 "ಡಾ    ಖಾಲಿಲ್.. ಹೇಳ್ತ್ರ್  ಒಂದ್ ದಿನಕ್ಕೂ ಜಾಸ್ತಿ ಇಡೂಕಾತ್ತ್"
"ಗುಡ್ ನನಗೇ ಗೊತ್ತಿರಲಿಲ್ಲ ಈ ವಿಷಯ... ಅಂದ ಹಾಗೇ ಯಾರು ಈ ಡಾಕ್ಟರ್ ಖಾಲಿಲ್..?
ಡಾಕ್ಟರ್ ಅಲ್ಲ, ಡಾಗರ್ ಖಾಲಿಲ್
ಹ್ಞೂ ಅವರೇ .. ಯಾರಾತ?
ನಮ್ಮ ಮನೆ ಗಲ್ಲಿ ಯಗೆ ಮಾಂಸದ ಅಂಗಡಿ ಹೈಕಂಡ್ ಇದ್ದ
"ಯಾರೀ..?. ಇದೂ ಸೀನ ..    ನೋಡಿ ಶ್ರೀಮಾನ್ ಸೀನ....!!!"

"ಶ್ರೀಮಾನ್ ಅಲ್ಲ ಚೌತಿಪಾಲ್ ಸೀನ.. "     ತಿದ್ದಿದ
ಒಕೆ.. ಓಕೆ.................  ನಾವೆಲ್ಲಿಯವರೆಗೆ ಓದಿದ್ದು...? 
ಉತ್ತರ ಬಂತು   "ಎರಡನೇ ಕ್ಲಾಸ್ ಫೈಲ್ ......!!"     ಒಡೆಯಿತು ಕಟ್ಟೆ
"ಇಲ್ಲಿಗ್ಯಾಕ ಬಂದದ್ದು?.................

"ಕಥಿ ಹೈಲ್ ಅಯ್ತಲ್ಲ ಮರಾಯ್ರೆ,
ನಾನು ಬಂದದ್ದು ಇಲ್ಲಿಗಲ್ಲ ಕೆಸುವಿನೆಲೆ ಪತ್ರೊಡೆ ತಂದಿದ್ದೆ, ಜೋಯಿಸರಿಗೆ ,   ತಪ್ಪಕೆ ಹೇಳದ್ದ ಗೋಪಿನಾಥ ನಿಮ್ಮ ಆ ಜುಟ್ಟಿನ ಬಟ್ರ ನನ್ನ ಕರ್ಕಂಡ್ ಇಲ್ಲಿಗೆ ಬಂದ್ ಬಿಟ್ರ. ನಾನಲ್ಲ ಅಂದ್ರೂ ಕೇಣಲ್ಲೆ.
ಎಂತ ಮಾಡೂದ್ ನೀವೇ ಹೇಳೀ"
ಕಾರಂತರ ಕ್ಲಾಸಲ್ಲಿ ಹೊರಗಡೆ ಹಾಗೆಲ್ಲಾ ಯಾರು ತಿರುಗಾಡುತ್ತಾ ಇರೋ ಹಂಗಿಲ್ಲ, ಜುಟ್ಟಿನ ಬಟ್ಟ ಯಾರಿದ್ದರೂ ಜಬರ್ದಸ್ತಿ ಕ್ಲಾಸಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಇವತ್ತು ನಮ್ಮ ಭಾವನಿಗೆಂತ ಪತ್ರೊಡೆ ತಂದು ಸೀನ ಬಟ್ಟನ ಹತ್ತಿರ ಸಿಕ್ಕಿ  ರಸಾಯನ ಶಾಸ್ತ್ರದ ಕಾರಂತರ ಕೈಲಿ ಸಿಕ್ಕಿಬಿದ್ದಿದ್ದ.

"ಯಾರ್ರೀ ಗೋಪಿನಾಥ..? .............".
ಕೋರಸ್  "ಇವತ್ತು ಬರಲಿಲ್ಲ ಸಾರ್...."

ನಾನು ಕ್ಲಾಸಿಗೆ ಯಾಕೆ ಬರಲಿಲ್ಲ ಎಂದು ನಿಮಗೆ ಗೊತ್ತಾಗಲು ನೀವು ಸ್ವಲ್ಪ ಕಾಲ ಹಿಂದಕ್ಕೆ ಹೋಗಬೇಕು.............

ಆಗೆಲ್ಲ ನನಗೆ ಯಕ್ಷಗಾನದ ಹುಚ್ಚು ಬಹಳ, ಎಲ್ಲಕ್ಕಿಂತ ನಾನು ಮಾಸ್ತರ ಮಗ ಅಂತ ಇಡಗುಂಜಿ ಮೇಳದದ್ದಾದರೆ ಫ್ರೀ ಪಾಸ್, ತಂದೆಯವರಿಗೆ ಪರಿಚಯಾಂತ, ನಮ್ಮ ಅಮ್ಮನ ಮನೆ ಉತ್ತರಕನ್ನಡ ಅದಕ್ಕೆ.ರಾತ್ರೆಯ ಯಕ್ಷಗಾನ ಮುಗಿಸಿ ನೇರ ಕ್ಲಾಸಿಗೆ ಬಂದಿದ್ದೆ. ಜಾಸ್ತಿ ಬೇಗನೇ ಅಂದರೆ ಸುಮಾರು ೭ ಗಂಟೆಗೇ ಪ್ರಿನ್ಸಿಪಾಲ ರೂಮಿನ  ಪಕ್ಕದ ರೂಮಿನೊಳಕ್ಕೆ ನುಗ್ಗಿ ಹಿಂದಿನ  ಬೆಂಚನಲ್ಲಿ ಮಲಗಿಬಿಟ್ಟಿದ್ದೆ. ಹಾಗೇ ಜೊಂಪು ಹತ್ತಿತ್ತು.

ಕ್ಲಾಸ್ ಶುರುವಾದ ಹಾಗೇ, ವಿಧ್ಯರ್ಥಿಗಳೆಲ್ಲರೂ ಒಮ್ಮೆಲೇ ನುಗ್ಗಿ ಬಂದ ಹಾಗೇ, ಶೆಟ್ರು ಮಾಸ್ಟ್ರು ಬಂದ ಕ್ಲಾಸ್ ಶುರು ಮಾಡಿದ ಹಾಗೆ..
ಯಾರೋ ಅಲುಗಾಡಿಸಿದ ಹಾಗೆ ಆಯ್ತು. ಬಾವಿಯೊಳಗಿಂದ ಸೀನನ ಸ್ವರ...         ಈತ ನಿದ್ದೆಯಲ್ಲೂ ನನ್ನ ಬಿಡ.. ಹೇಳೋಣ ಅಂದ್ಕಂಡೆ,.. ಹೇಳಲಿಲ್ಲ..
ಕೆಸುವಿನ ಪತ್ರೊಡೆ ತಂದ್ನಾ ಅಂದ. ನಿದ್ದೆಯಲ್ಲೂ ನನ್ನ ಅತ್ಯಂತ ಪ್ರೀತಿಪಾತ್ರ ತಿಂಡಿ ಅದು!!!!!!               ಧಡ್ ಅಂತ ಎದ್ದೆ.
ಆಗಲೇ ಚಟೀರ್ ಅಂತ ಏಟು ಬಿತ್ತು ಕೆನ್ನೆ ಚುರೀಲ್ ಅಂತು.
ಹಾಗಾದರೆ ಇಷ್ಟರ ವರೆಗಿನದ್ದು ನನ್ನ ಕನಸು ನಿಜವಾದದ್ದೇ

ಇದಿರಲ್ಲಿ ಶೆಟ್ರು ದುರುಗುಟ್ಟಿಕೊಂಡು ನಿಂತಿದ್ದರು ಅವರ ಫೋಸು ನೋಡಿದರೆ ಕೆನ್ನೆಗೆ ಬಾರಿಸಿದ್ದು ಅವರೇ ಅನ್ನಿಸಿತು..
"ಸರ್ ಇವನು ಸೈನ್ಸ್ ಕ್ಲಾಸ್ ..               " ಪಕ್ಕದ ಕೋರಸ್
ಯಾಕೋ ಕತ್ತೆ ಭಢವಾ ಬೇರೆ ಕ್ಲಾಸಲ್ಲಿ ಬಂದು ನಿದ್ದೆ ಮಾಡ್ತಾ ಇದ್ದಿಯೇನೋ...                "              ಉಳಿದದ್ದು ನನಗೆ ಕೇಳಿಸಲಿಲ್ಲ

ಯಾಕೆಂದರೆ ...ಬಿದ್ದೇನೋ ಕೆಟ್ಟೆನೋ ಎದ್ದು ಓಡಿದ್ದೆ.... ಹೊರಕ್ಕೆ
ಆಗ ಕೇಳಿಸಿತು... ಪರಿಚಿತ ಸ್ವರ .

ಏಯ್!!.     ಜೊಯ್ಸರಿಗೆ.....     ಪತ್ರೊಡೆ!!!!...             ಇದಿರಲ್ಲಿ ಸೀನ!!!

ನಾನು  ಪೆಟ್ಟು ತಿಂದದ್ದು   ಈತ ನೋಡಿರಬಹುದಾ?

ಸೀನನ ಬಜನೆ ರಾಮ ಮತ್ತು ತೊರ್ಕಿ ಸಪ್ಪು

ಸೀನನ ಬಜನೆ ರಾಮ ಮತ್ತು ತೊರ್ಕಿ ಸಪ್ಪು


 

ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,
ಅದಾದ ಒಂದೇ  ವಾರದಲ್ಲಿ ನನಗೆ    ಊರಿಗೆ ಹೋಗಬೇಕಾಯ್ತು.
ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲಿ ನನಗೆ ಎಡವಟ್ಟೇ ಕಾಣಿಸಿತು.
" ಪಾರ್ಟಿಯಲ್ಲೇ ಎರಡು ಹೋಳಾಯ್ತಾ............??
ಅಂತಹಾ ದುಶ್ಮನ್ ಗಳಾದ ಅಂಬಾನಿ ಸಹೋದರರೇ ಒಟ್ಟಾಗ್ತಾ ಇದ್ದಾರೆ, ನೀವು ಹೀಗೆ......?"
ಮಾತು ಮುರಿದ ಸೀನ ಇಲ್ಲಪ್ಪಾ ಅಂತಹದ್ದೇನಿಲ್ಲ.. ಸುಮ್ಮನೆ."ಅಂದ
ಆಗ ಶೀನನ ಧರ್ಮ ಪತ್ನಿ ಸಿಡಿದಳು
 "ಇವ್ರಿಗೆ ಎಲ್ಲಾ ಹಾಂಗೇ ಬಿಡಿ, ಅದ ಆದದ್ದ ನಮ್ಮ್ ಮನಿಯಲ್ ಅಲ್ದಾ..? ಇವ್ರಿಗೇನ್ ಕಾಣಿ, ಇವ್ರ್ ಮನಿಯಗಾ ಆದ್ದ್? "
"ವಿಶಯ  ಏನ್ ಹೇಳಾ ಸೀನಾ, ಅಂವ ಹೇಳೂದಿಲ್ಲ ಅಂತ್ ಕಾಂತತ್ತ್, ನೀವ್ ಹೇಳಿ ಕಾಂಬೋ"
"ಪಿಣಿಯ ಭಾವ ಮೊನ್ನೆ ಬಂದಾಳಿಕೆ ಹೇಳ್ರ್
ಅಲ್ದೇ ನಮ್ಮ್ ಮನಿಗೆ ಯಾರೋ ಸ್ವಾಮಿ ಬಂದ್ ಝಂಡಾ ಹೂಡಿದ ಅಂಬ್ರ್ ಮರೇರೆ, ಅಂವ  ಎಲ್ಲಿಂದ ಬಂದ ಅಂತ ಯಾರಿಗೂ ಗೊತ್ತಿಲ್ಲೆ,  ಅಪ್ಪೈಯ್ಯನ್ನ್ ಅಮ್ಮನ್ನ ಎಂತ ಮದ್ದ್ ಹಾಕಿನೋ ಗೊತ್ತಿಲ್ಲೆ, ಇಪ್ಪತ್ನಾಲ್ಕು
ಘಂಟೆಯೂ  ಆ ಮನೆಹಾಳ್ ಸ್ವಾಮಿದೇ ಪೂಜೆ ಮಾಡ್ಕಂಡ್ ಇರ್ತ್ರ್ , ಗದ್ದೆ ಹೊಲ ತೋಟ ಎಲ್ಲ ಎಂತದ್ದೂ ಮಾಡ್ದೇ ಹಾಂಗೇ ಬಿದ್ಕಂಡಿತ್ತ್ , ಆ ಪೂಜೆ ಈಪೂಜೆ ಅಂದೇಳಿ ಸಿಕ್ಕಾ ಪಟ್ಟೆ ದುಡ್ಡ ಅವ್ರದ್ದ್ ಖಾಲಿ ಮಾಡತ್ರ್ , ಇವ್ರ ಪಾಪದೋರಲ್ದಾ, ಅವ್ನ್ ಹೇಳ್ದ್ ಹಾಂಗೇ ಮಾಡ್ತ್ರ ಅಂಬ್ರ್, ನಮ್ಗಂತೂ ಎಂತ್ ಮಾಡೂದಂತೆಳಿ ಗೊತ್ತಾತಿಲ್ಲೆ.
ಕೆಲ್ಸದೋರೆಲ್ಲಾ ಅವ್ರಿಗ್ ಸಿಕ್ಕದ್ದಷ್ಟ್ ಕಟ್ಕಂಡ್ ಹೋತ್ರ , ಇವ್ರಿಗ್ ಹೇಳ್ರೆ ಈ ಹಳ್ತಿನ್ ಕಾಲ್ದಲ್ ಮಾವ ಅತ್ತೆಗ್ ಯಾಕ ಮನಸ್ಸಿಗ್ ಬೇಜಾರ್ ಮಾಡ್ಕ್ ಅಂತ್ರ್ ಕಾಣಿ, ಪಿಣಿಯ ಭಾವ ಮೊನ್ನೆ ಬಂದಾಳಿಕೆ ಹೇಳ್ರ್ ಆ ಸ್ವಾಮಿ ಸರಿಯಿಲ್ಲೆ ಅಂಬ್ರ"

ನಾನೆಂದೆ" ಸೀನಾ ಹೌದಾ ಈಗ್ಳಿಕೆ ಇಂತ ಮನೆ ಹಾಳ ಸ್ವಾಮಿಯರ ಜಾಸ್ತಿಯಾರ್ ಮರಾಯಾ, ಎಂತದ್ದಾರೂ ನೀನ ಮಾಡ   ಕಂಬೋ"
" ನಂಗ್ ಎಂತ ಮಾಡೂಕಾತ್ತ್?" ಸೀನನ ಖಾಲಿ ನೋಟ.
ಯಾಕಾ ಬಜನೆ ರಾಮನ ಕಥಿ ನೆನಪ್ ಹೋಯ್ತನಾ? "

ಯಾರದ್..? ಕೇಳಿದಳು ಲಚಮಿ, ಅದೊಂದ್ ದೊಡ್ಡ ಕಥಿಯೇ.." 
ನಾನೂ ಸೀನ ಇಬ್ಬರು ಒಮ್ಮೆಲೇ ಕಾಲಯಾನದಲ್ಲೇ ಹಿಂದಕ್ಕೋಗಿ ಬಾಲ್ಯದಲ್ಲಿಳಿದೆವು

 "ಈ ಬಜನೆ ರಾಮ ಎಲ್ಲಿಂದ ಬೈಂದ ಮರಾಯರೇ"  ಕೇಳಿದ ಸೀನ.
"ನಂಗೆ ಯಾಕ, ಸ್ವತಹ ಶಾನುಭಾಗರಿಗೇ ಗೊತ್ತಿಲ್ಲ ಅಂಬ್ರು ಮರಾಯಾ"
"ಮೊದಲು ಸಣ್ಣಿಪ್ಪತ್ತಿಗೇ ದೇಶಾಂತರ ಹೋದ ನಾಯ್ಕರ ಮಗ ಅಂಬ್ರ ಹೌದಾ?" ಸೀನ
"ಹೌದಾ ಅಲ್ದಾ ಯಾರಿಗ್ ಗೊತ್ತಿತ್ತ್? ಅದೆಲ್ಲ ಇರ್ಲಿ ಈಗ ಶಾನಭಾಗರ ಮನೆಯಗೇ ಗಜ್ಜ್ ಹೊಯ್ದ ( ತಳವೂರಿ) ಇಪ್ಪದಾ ಮರಯಾ, ಅವ್ರಂತೂ ಎಂತದ್ದೂ ಹೇಳೋರಲ್ಲ, ಮಕ್ಕಳಿಗೆಲ್ಲಾ ಎಷ್ಟ್ ಕಷ್ಟ ಗೊತ್ತಿತ್ತಾ ನಿಂಗೆ? ಇಲ್ಲ್ ಶಾಲಿಗೋಪುಕೆ ತಡ ಆತ್ತ್, ಅಲ್ಲ್ ಇಂವ ಮಾಡಿ ಇಟ್ಟ ಬಿಸ್ನೀರೆಲ್ಲಾ ಖಾಲಿ ಮಾಡೂದಂಬ್ರ, ಆ ಬಜನೆ ಏನ್, ದರ್ಶನ ಏನ್ , ಎರಡ್ಮೂರ್ ತಿಂಗ್ಳಿಂದ ಎಲ್ಲರಿಗೂ ತಲೆ ಬಿಸಿ ಮಾಡ್ದ ಅಂಬ್ರ ಕಾಣ " ನಾನು.
"ಇರ್ಲಿ ಬಿಡಾ, ನಿಮ್ಮನೆಯಗ ಅಲ್ಲ ಅಲ್ದಾ ಅಂವ ಇದ್ದದ್ದ್ ,ಅಥವಾ ಶಾನ್ಭಾಗರಿಗೆ ಒಂದ್ ಚಂದದ ಮಗಳ ಇದ್ದ್ಲ್ ಅಂದೇಳಿಯಾ?" ಸೀನ.
"ಏಯ್ ಎಂತದ್ದೆಲ್ಲಾ ಹೇಳ್ಬೇಡ, ಪಾಪ ಏನಾರೂ ಒಂದ್ ಮಾಡ್ಕಲ್ಲೆ ಈಗ, ಅಂವನ್ ಅಲ್ಲಿಂದ ಓಡ್ಸೂಕೆ."
"ಸರಿ ಯಂತದ್ದಾರೂ ಮಾಡುವಾ  ನೀ ಬಿಡ, ನಾ ಕಂಡ್ಕಂತೆ ಅವನ ಕಥೆ"
ಸೀನ ಹೀಗೆ ಹೇಳಿದ ಅಂದರೆ ಖಂಡಿತಾ ಏನಾರೂ ಮಾಡೇ ಮಾಡ್ತಾನೆ.

ಸೀನ ಕೆಲ್ಸ ಆದಿನ ಸಂಜೆಲೇ ಶುರು ಅಯ್ತ, ಅಲ್ಲೆಲ್ಲಿಂದ್ಲೋ ಸೌತೆ ಹಣ್ಣು ತಕಂಡ ಬಂದ್ ನಂಗ್ ಕೊಟ್ಟ,
"ಇದೆಂತದ್ದಾ ಹಕ್ಲ್ ಸೌತೆ? ಯಂತಕ್ಕೆ ಇದ್?
ಇದ್ ಕಾಂಬಕೆ ಸರಿ ಇತ್ತ ಆದ್ರೆ ಇದ್ ಒಳ್ಗೆ ಕೊಳ್ತೋಯ್ತ್!( ಹಾಳಾಗಿ ಕೊಳೆತಿದೆ) ಇದನ್ನ ನಿಮ್ಮ ಮನೆಯಗೇ ಸೌತೆಕಾಯಿ ಕಟ್ಟು ಜಾಗದಗೆ ಕಟ್ಟ್, ಆ ರಾಮ ಕೂತ್ಕಂಬ್ ಜಾಗದಗೇ ಮೇಲ್ ಕಟ್ಟ್ಕ್ ಅಕ್ಕಾ?.
ಕಟ್ಟದ್ ಗಂಟ್ ಮಾತ್ರ ಒಯ್ಗಂಟ ಆಯಿರ್ಕ್. ಅದ್ರ ತುದಿಗೆ ಕಪ್ ನೂಲ್ ಕಟ್ಟಿ ಹೊರ್ಗೆ ಕಿಟ್ಕಿಲಿಡ್, ಮತ್ತೆಲ್ಲ ನಾ ಕಂಡ್ಕಂತೆ.
ಹಾಂಗೇ ಅಂವ ಅವ್ನ್ ಗಾಳಿಪಟ ಎಲ್ಲ್ ಒಣೂಕ್ ಹಾಕ್ತ?  ಗೊತ್ತಯಿಲ್ಲ್ಯ? ಅದೇ ಮರಯಾ ಅವ್ನ್ ಕಚ್ಚೆ?
ತೊಂಡಿ ಚಪ್ರದಗೆ ಅಲ್ದಾ? ಇನ್ನ್ ಬಿಡ ...
ಆತ ಅದೆಲ್ಲಿಂದ್ದೋ ತೊರ್ಕಿ ಸಪ್ಪು ತಂದು ರಾಮನ ಗಾಳಿಪಟಕ್ಕೆ( ಉದ್ದದ ಹಳೆ ಕಚ್ಚೆ )ಗೆ ಚೆನ್ನಾಗಿ ಹಚ್ಚಿದ.
( ಇಲ್ಲಿ ತೊರ್ಕಿ ಸಪ್ಪಿನ ವಿಷಯ ಹೇಳಬೇಕು, ಎಲೆಯ ಮೇಲೆ ಸಣ್ಣ ಸಣ್ಣ ಕೂದಲಿನಂತ ಎಳೆಗಳಿವೆ ಅವು ಎಲ್ಲೆಲ್ಲಿ ನಮ್ಮ ಚರ್ಮಕ್ಕೆ ತಾಗ್ತದೋ ಅಲ್ಲೆಲ್ಲ ಸಿಕ್ಕಾಪಟ್ಟೆ ತುರಿಯೆದ್ದು ಯಮಯಾತನೆ ಅನುಭವಿಸಬೇಕಾಗುತ್ತೆ)

 ಇನ್ನು ಕೊಳೆತ ಸೌತೆ ಕಾಯಿ ಭಯಂಕರ ವಾಸನೆಯದ್ದು ಅದು ತಲೆ ಮೇಲೆ ಬಿದ್ದರೆ ಆ ಅತಿ ಭಯಂಕರವಾದ ವಾಸನೆ ತೊಡೆಯಲು  ಆ ಪ್ರಾಣಿ ಸ್ನಾನ ಮಾಡಲೇ ಬೇಕು,
ಸ್ನಾನ ಮಾಡಿ ತೊಂಡೆ ಚಪ್ಪರಕ್ಕೆ ಬರಲೇ ಬೇಕಲ್ಲ  ..?

ನಂತರ ಬಜನೆ ರಾಮನ ಹೆಸರೇ ಇತಿಹಾಸವಾಯ್ತು.

ಇದೆಲ್ಲ ಹೇಳಿ ನಾನು ಸೀನ ಮತ್ತು ಲಚಮಿಯ ಮುಖ ನೋಡಿದೆ.ಲಚಮಿಯ ಮುಖದಲ್ಲೂ ಅರಾಧನೆಯ ನೋಟ,

"ಸರಿ ಯಂತದ್ದಾರೂ ಮಾಡುವಾ  ನೀ ಬಿಡ, ನಾ ಕಂಡ್ಕಂತೆ ಅವನ ಕಥೆ"

ಸೀನ ಹೀಗೆಂದ ಅಂದರೆ ಲಚಮಿಯ ಮನೆಯಲ್ಲಿ ಬಂದ ಸ್ವಾಮಿಗೂ ಗತಿಗೋತ್ರ ಇಲ್ದ್ ಕಾಲ ಬಂತ್ ಅಂತೇ ಅರ್ಥ.

ಸೀನನ ಮಾವಿನ ದಾಹ ಮತ್ತು ಸಿಟಿ ಆಸ್ಪತ್ರೆ

ಸೀನನ ಮಾವಿನ ದಾಹ ಮತ್ತು ಸಿಟಿ ಆಸ್ಪತ್ರೆ


ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ.
೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ.
ಅದರಲ್ಲಿ   ಅರ್ಧ ಆಗಲೇ ಖಾಲಿಯಾಗಿದೆ
ಆತನ ಎಲ್ಲಾ ಪಟಾಲಮ್ ಅಲ್ಲಿಯೇ ಇತ್ತು.ಯಾವುದೋ ಭಯಾನಕ ಪ್ರಯೋಗಶಾಲೆಯ ಮೇಜಿನ ಮೇಲಿದ್ದ ಸರೀಸೃಪದಂತೆ ಬಿದ್ದುಕೊಂಡಿದ್ದ.
ಅವನ ಪೂರಾ ಸಂಸಾರ ಅವನನ್ನು ಕೊಳ್ಳೆಯಂತೆ ನೋಡಿಕೊಳ್ಳುತ್ತಿತ್ತು.
ಕೈಯಿಂದ, ಮೂಗಿನಿಂದ ಹೊರಟ ಪೈಪುಗಳು ಇನ್ನೂ ಅಂತಹುದನ್ನು ಧೃಡಪಡಿಸುತ್ತಿದ್ದು, ತ್ಯಾಂಪ ಹಳೆಯ ಮತ್ತು ಹೊಸ ಕಾಲದ ಕೊಂಡಿಯಂತೆ ಭಾಸವಾಗುತ್ತಿದ್ದ.

ಎಲ್ಲಿ ಸೀನ...?   ಕೇಳಿದೆ

 ತ್ಯಾಂಪ ಪಕ್ಕದ ರೂಮು ತೋರಿಸಿದ, ಹೋಗಿ ನೋಡಿದೆ. ಇಡೀ ರೂಮೇ ಖಾಲಿ.. ಖಾಲಿ, ಹಾಗಿದ್ದರೆ ಎಲ್ಲಿಗೆ ಹೋಗಿರಬಹುದು ಈತ.?

ಹಾಗೇ  ವರಾಂಡದಲ್ಲಿ ನಡೆಯುತ್ತಲಿದ್ದೆ,  "ಭ್ರೂಣ ಹತ್ಯೆ ಮಹಾಪಾಪ", " ಈ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧಿಸಿದೆ" ಎಂಬೆಲ್ಲಾ ಬೋರ್ಡ ಕಾಣಿಸುತ್ತಿತ್ತು. ಅದರ ಪಕ್ಕದಲ್ಲಿಯೇ ಹೆಣ್ಣು ಮಗಳೊಬ್ಬಳು ತನ್ನ ಹದಿಹರೆಯದ ಮಗಳೊಂದಿಗೆ ಗಟಾಣಿ ನರ್ಸ ಜತೆ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದಳು, ಆ ಸಣ್ಣ ಹುಡುಗಿಯ ಮುಖ ಕಳೆಗುಂದಿತ್ತು. ಈಚೆ ತಿರುಗಿದೆ, ಪಕ್ಕದಲ್ಲಿಯೇ ಕೈಗಾಡಿಯೊಂದರಲ್ಲಿಯಾರನ್ನೋ ಹೊತ್ತೊಯ್ಯುತ್ತಿದ್ದರು. ಮುಖ ನೋಡಿ ಬೆಚ್ಚಿದೆ ಸೀನನಾ...? ಹೌದಾದರೆ ಅವನಿಗ್ಯಾಕೆ ಆಪರೇಶನ್..?

ಗುಂಡು ಕಲ್ಲಿನ ಹಾಗೆ ಇದ್ದವ ಇಂವ.  ಮೊನ್ನೆ ತಾನೇ ನಾನೂ ಅವನೂ ಮಾತಾಡಿದ್ದೆವು.ಸಂಪದ ಸಂಮಿಲನಕ್ಕೆ ಬರಲು ಹೇಳಿದರೆ ಸುತರಾಮ್ ಒಪ್ಪಲಿಲ್ಲ ಆತ, ಅದೆಲ್ಲಾ ನಿನಗೇ ಸರಿ ಪೇಟೆಯವ್ರಿಗೆ, ನೀವೇ ಕಂಡ್ಕಳಿ , ಊರ ಕಡೆ ಬಂದ್ರೆ ಹೇಳಿ ಅಂದಿದ್ದ. ಬೆಂಗಳೂರಿಗೆ ಬರ್ತೇನೆ ಎಂದಿದ್ದ, ತ್ಯಾಂಪನನ್ನು (ಸೀನನ ಹೆಂಡತಿಯ ದೂ.............ರದ ಅಣ್ಣ) ಆಸ್ಪತ್ರೆಗೆ ಸೇರಿಸಿದ್ದಾರೆ, ಅವನನ್ನು ನೋಡಲು ಬರುತ್ತಿರುವುದಾಗಿ ಹೇಳಿದ್ದ. ಅದೇ ಸಿಟಿ ಆಸ್ಪತ್ರೆಯಲ್ಲಿ "ಎಂತ ಆಯ್ತಾ ನಿನ್ನ ಭಾವಂಗೆ..?"


ಒಂದರ್ಥದಲ್ಲಿ ಸೀನನೇ ಕಾರಣ ತ್ಯಾಂಪನ ಆಸ್ಪತ್ರೆ ದರ್ಶನಕ್ಕೆ. ಇದಕ್ಕೆ ಕಾರಣ ಮಾವಿನ ಹಣ್ಣು ಮತ್ತು ಸೀನನ ಅವಿನಾಭಾವ ಸಂಭಂಧ. ಇದು ನಾನು ಅವನೂ ಚಿಕ್ಕವರಿರುವಾಗಿನಿಂದಲೇ ಆರಂಭವಾಗಿತ್ತು
ನಮ್ಮ ಹಳೆ ಶಾಲೆಯ ಪಕ್ಕ ಒಂದು ದೊಡ್ಡ ಮಾವಿನಮರವಿತ್ತು, ಅದರ ಹಣ್ಣೋ ಬಲು ರುಚಿ. ಮಳೆಗಾಲ ಬಂತೆಂದ್ರೆ ಗಾಳಿಗೆ ಬೀಳುವ ಹಣ್ಣುಗಳನ್ನು ಆಯ್ದುಕೊಳ್ಳಲು ನಮ್ಮಲ್ಲಿ, ಮಕ್ಕಳಲ್ಲಿ ಯಾವಾಗಲೂ ಜಗಳ.ಆಗಲೇ ನಾನು ಸೀನನೂ ಒಂದು ಒಪ್ಪಂದ ಮಾಡಿಕೊಂಡಿದ್ದೆವು.
ಶಾಲೆ ಬಿಡುವ ಸ್ವಲ್ಪ ಮೊದಲು ಏನಾದರೊಂದು ಸಬೂಬು ತೆಗೆದು ನಮ್ಮಿಬ್ಬರಲ್ಲಿ ಒಬ್ಬರು ಹೊರಗೆ ಹೋಗಿ ಮರದ ಹತ್ತಿರ ಇದ್ದು , ಕೆಳಗೆ ಬೀಳುವ ಎಲ್ಲಾ ಹಣ್ಣುಗಳನ್ನೂ ಆರಿಸಿಕೊಳ್ಳುತ್ತಿದ್ದೆವು, ಶಾಲೆ ಬಿಟ್ಟಮೇಲೆ ಹಂಚಿಕೊಳ್ಳುತ್ತಿದ್ದೆವು. ಅದನ್ನ ನಮ್ಮ ಮುಖ್ಯೋಪಾಧ್ಯಾಯರ ಮಗ ಕಂಡುಹಿಡಿದು ಹೇಳಿ ರಾಮಾಯಣ ಮಾಡಿದ್ದ, ಎಷ್ಟೋ ಸಾರಿ ಮಾವಿನ ಹಣ್ಣು ತಿಂದ ಸೀನ ನಿದ್ದೆ ಮಾಡುತ್ತ ಸಿಕ್ಕಿ ಬಿದ್ದು ಹೊಡೆತ ತಿಂದಿದ್ದ, ಪರೀಕ್ಷೆಗೆಂದು ಓದುವಾಗಲೂ  ಯಥೇಚ್ಚ ಮಾವಿನ ಹಣ್ಣು ತಿಂದು ಗೊರಕೆ ಹೊಡೆದು ನಾನೂ ಅವನೂ ನಮ್ಮ ನಮ್ಮ ಮನೆಯವರಿಂದ ಪೆಟ್ಟು ತಿಂದಿದ್ದೆವು.
ಈಗಲೂ ಅಷ್ಟ್ಟೇ ಮಾವಿನಹಣ್ಣು ಸೀನನ ವೀಕ್ನೆಸ್. ತ್ಯಾಂಪನಿಗೆ ಸೀನನೇ ಆದರ್ಶ ಪುರುಷ.

"ಎಂತ ಇಲ್ಯಾ, ಭಾವ ಅವ್ನ್ ಫ್ರೆಂಡೂ ಶಿವಾಜಿನಗರಕ್ಕೆ ಹೋಯ್ತಿದ್ರಂಬ್ರು",ತ್ಯಾಂಪನಿಗೆ ಆ ಅಕ್ಸಿಡೆಂಟ್  ಹೇಗಾಯ್ತು ಎನ್ನುವ ವಿವರಣೆ ಸೀನ ನನಗೆ ಕೊಡುತ್ತಿದ್ದ

, "ನಾನ್ ನಮ್ ಶಾಲಿಗೋಪತ್ತಿನ  ಕಥಿ ಅವನಿಗ್ ಹೇಳಿದ್ದೆ......    ",ಮೇಖ್ರಿ ಸರ್ಕಲ್ ನಿಂದ ಶಿವಾಜಿನಗರಕ್ಕೆ ಹೋಗುವ ರಸ್ತೆಯಲ್ಲಿ ,(ಇತ್ತೀಚೆಗೆ ರಸ್ತೆಯ ಪಕ್ಕದ ಎಲ್ಲಾ ಮರಗಳನ್ನೂ (ಅದರಲ್ಲಿ ಮಾವಿನ ಮರಗಳೂ ಇದ್ದುವು) ಹಾಗೇ ಬಿಟ್ಟು ಅಗಲೀಕರಣ ಮಾಡಿದ್ದರು),
ಮಾವಿನ ಮರವನ್ನು ನೋಡಿದ, ಆಗಲೇ ಗಾಳಿ ಮಳೆಯೂ ಶುರುವಾಗಿತ್ತು

"ಅಂವ ಕಲ್ ತಕಂಡ್ ಮರಕ್ಕ ಹೊಡ್ದ , ಅದ ತಪ್ಪಿ ಆಚಿ ಬದಿ ಮಿಲಿಟರಿಯರ್ ಮನಿಗ್ ಬಿತ್ತ್. ಮೇಜರ್ ಹೊರ್ಗೇ ತಿರ್ಗ್ ಕಂಡ್ ಇದ್ದ, ಅವ್ನ್ ಕೈಲಿದ್ದ ನಾಯಿ ಬಿಟ್ಟ!!! ಇಬ್ಬರು ಓಡೂಕ್ ಸುರು ಮಾಡ್ರಂಬ್ರ್, ರಸ್ತಿಮೇಲ್ ಬಪ್ಪ ಬೈಕಿಗ್ ಡ್ಯಾಷ್ ಹೊಡ್ದ್ ಬಿದ್ದ, ಅಷ್ಟೇ ಅದ್ರ ಸಾಕಿತ್ತ್.
ಅದೇ ನೋವ್ ತಕಂಡ್ ಮನಿಗ್ ಹೋದ್ರ,
ರಾತ್ರೆ ಅಟ್ಟದ ಮೇಲಿನಿಡ್ಲಿ ಅಟ್ಟ ತೆಗೂಕ್ ಹೋಯಿ, ಅತ್ತೆ ಮೇಲಿಂದ್ ಬೀಳ್ತಿದ್ರಂಬ್ರ, ಅವ್ರನ್ನ್ ಹಿಡುಕೋಯಿ ಇವ ಕೆಳ್ಗೆ ಇವ್ನ್ ಮೇಲ್ ಆ ಹಿಡಿಂಬಿ... ಆಯ್ತ್ ಅವ್ನ್ ಕಥಿ..."



ನಾನು ಕೌಂಟರಿನಲ್ಲಿ ಕೇಳಿದೆ, ಯಾರಿಗೆ ಆಪರೇಶನ್?
ಅಪೆಂಡಿಸೈಟಿಸ್ ೫೮ ವರ್ಷದ ವಿಕ್ರಮ್ ಅಂತ ಸರ್"
ಅವರ ಬೆಡ್/ ವಾರ್ಡ್ ನಂಬರ್ ಎಷ್ಟು?
ಒಂಭತ್ತು ಸರ್!!!
ಓಡಿದೆ  ಅಲ್ಲಿಗೆ, ಎಂಟರ ಪಕ್ಕದ್ದಕ್ಕೆ, ಅಲ್ಲಿ ಆ ಪ್ರಾಣಿ ಕಾಯ್ತಾ ಇದೆ ಆಪರೇಷನ್ಗೆ, ನಾನು ಅದಕ್ಕೇ ಬಂದ ಹಾಗೆ
ಹಾಗಾದರೆ ನಿಜವಾಗಿ ಆಪರೇಷನ್ ನಡೆಯ ಬೇಕಾದವರು ಇಲ್ಲಿದ್ದರೆ..?  ಯಾರಿಗೆ ಆಗ್ತಾ ಇದೆ ಆಪರೇಷನ್...................? ಸೀನ...?
ನನ್ನ ಎದೆ ಡವಡವ , ಸರಿ ಐದರ  ನಂತರ ಆರು ಇರಬೇಕಿತ್ತಲ್ಲಾ.. ಇಲ್ಲೂ ೯ ಇದೆ, ಸರಿಯಾಗಿ ನೋಡಿದಾಗ ಗೊತ್ತಾಯ್ತು ಆರರ ಮೇಲಿನ ಸ್ಕ್ರೂ ಕಳಚಿದ್ದು .
ಸೀದಾ ಓಟಿಗೆ ಓಡಿದೆ.

ಹರಸಾಹಸ ಮಾಡಿ ಸೀನನ ಹೊಟ್ಟೆ ಕೊಯ್ತ ನಿಲ್ಲಿಸಿದ್ದೆ.
ಇನ್ನೇನು ಪ್ರಯೋಗ ಶಾಲೆಯಲ್ಲಿನ ಕಪ್ಪೆ ತರ ಆಗಬೇಕಿದ್ದ ಸೀನ, ಸ್ವಲ್ಪದರಲ್ಲಿ ತಪ್ಪಿತು.

"ಎಂತದ್ದು ಮರಾಯಾ, ನಾನಲ್ಲ ಅಂಬ್ಕಾಯಿಲ್ಯನಾ ನಿಂಗೆ?" ಅಂದ್ರೆ ಬೆಬೆಬೆ ಅಂಬ ,
ವೈದ್ಯರು ಕೊಟ್ಟ ಸೂಜಿ ಮದ್ದಿನ ಪ್ರಭಾವ ಪಾಪ ಜಾಸ್ತಿಯೇ ಇತ್ತು.

ಶೀನ  ನನ್ನ ಮುಖ ನೋಡಿದ ಸನ್ನೆ ಮಾಡಿದ, ಇದರರ್ಥ ಕೂಡಲೇ ಜಾಗ ಖಾಲಿ ಮಾಡು ಅಂತ. ಇಲ್ಲಿಯೇ ಇದ್ದರೆ ತ್ಯಾಂಪನ ಜತೆ ಆತನೂ ಬಲಿಪಶು ಆಗೋದು ಬೇಡ  ಅಂತ, ಅವರಿಬ್ಬರ  ಹೆಂಡತಿಯರು ಮತ್ತು ಮಂಗಗಳನ್ನು ಕರೆದು ಕೊಂಡು ಹೊರಟೆ ತ್ಯಾಂಪನ  ಮನೆಯತ್ತ.....

ಸೀನನ ಅಕ್ಕಿ ಮುಡಿ ತಿರಿ ಮತ್ತು ಹರಿ ಪ್ರಸಾದ ನಾಡಿಗರು


ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್.
" ಹಿಲ್ಲೋ" 
ಸ್ವರ ಕೇಳುತ್ತಲೇ ಗೊತ್ತಾಯಿತು!!!   "ಸೀನ!!!"
"ಎನಪ್ಪಾ ಅಪರೂಪ"  ಅಂದೆ
"ನಿನ್ಮನೆ ಕಡೆನೇ ಬರ್ತಾ ಇದ್ದೆ ವಿಳಾಸ ಹೇಳು"  ಹೇಳಿದೆ. ಆತನೂ ಹತ್ತಿರದಲ್ಲೇ ಇದ್ದ.
ನೋಡುತ್ತೇನೆ ಮಳೆಯಲ್ಲೇ ನೆನೆಯುತ್ತಾ ಬರ್ತಾ ಇದ್ದಾನೆ ಕೈಯಲ್ಲೇ ಮಡಿಸಿದ ಕೊಡೆಯೂ ಇದೆ.
ಯಾಕಯ್ಯಾ? ಕೊಡೆ ಹಾಳಾಯ್ತಾ? ನನಗೆ ಹೇಳಿದ್ರೆ ಒಂದು ಮಳೆ ಕೋಟಾದರೂ ತಂದಿರ್ತಿದ್ದೀನಲ್ಲ? ಹತ್ತಿರದಲ್ಲೇ ಇತ್ತಲ್ಲಾ ನನ್ನ ಆಫೀಸು?
"ಅದೂ ಇದೆ ಈ ಬ್ಯಾಗಲ್ಲಿ!!!"
ಮತ್ತೆ ಯಾಕೋ? ಕೊಡೆನೂ ಇದೆ, ಮತ್ತೊಂದೂ ಇದೆ ಯಾವುದನ್ನೂ ಉಪಯೋಗಿಸಿಲ್ಲ?
ಬೇಜಾರಾಯ್ತು ಯಾರಮೇಲೆ ಬೆಂಗಳೂರ್ ಮೇಲಾ ಅಥವಾ ನನ್ನ ಮೇಲಾ?
ಎರಡೂ ಅಲ್ಲ ಮಳೆಯ ಮೇಲೆ? ಯಾಕೋ?
ಅಲ್ಲನಾ, ಯಂತ ಮರಾಯಾ ಬೆಂಗ್ಳೂರ್ ಮಳೆ ಅಂದರೆ ಹೊತ್ತಿಲ್ಲ ಗೊತ್ತಿಲ್ಲ!!! ಕೊಡೆ ಬಿಡಿಸೋದ್ರಲ್ಲಿ ನಾನು ಪೂರಾ ಒದ್ದೆ!! ಅಲ್ಲ ಸ್ವಲ್ಪ ಬಿಟ್ಟರಾತಿಲ್ವಾ?
ಸಿಟ್ಟೇ ಬಂತು. ಎಷ್ಟು ನೆನಸ್ತೆ ಕಾಂಬೋ,  ಅಂತೇಳಿ ಇನ್ನು ಬಿಡ್ಸಿದ್ರೇನು? ಬಿಟ್ಟರೇನು ಅಂತ ಹಾಗೇ ನೆನ್ಕೊಂಡು ಬಂದೆ.
"ಅಂದ ಹಾಗೇ ಯಾಕೋ ಈಕಡೆ?"
"ಯಾಕೆ ಬರ ಬಾರದಾ?"
"ಹಾಗಲ್ಲಪ್ಪಾ ಮಾತಿಗೆ ಕೇಳ್ದೆ."
"ಮೊನ್ನೆ ಮೊನ್ನೆ ನಾಡಿಗರು ಸಿಕ್ಕಿದ್ರು"
ಯಾರು?
"ಅದೇ ಸಂಪದದವರು"
ಎಲಾ  ಇವ್ನ, ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷ ಆಯ್ತು ನನಗಿನ್ನೂ ಅವರ ಭೇಟಿಯ ಭಾಗ್ಯ ಸಿಕ್ಕಿಲ್ಲಾ, ಇವನಿಗೆ ಹೇಗೆ ಸಿಕ್ಕಿದರು?
ಅರೇ ಸಂಪದ ನಿಂಗೆ ಗೊತ್ತಾ?
ಗೊತ್ತಿಲ್ದೇ ಏನು ? ನಂಗೆ ಸಂಪದದ ಎಲ್ಲಾರೂ ಗೊತ್ತು!! ಏನು ನಾಲ್ಕ ಅಕ್ಷರ ಬರೆದ್ರೆ ಮಾತ್ರ ಗೊತ್ತಗೋದೊ ಅಂದ್ಕಂಡಿದ್ದೀಯಾ?
ಅದಿರಲಿ ಇನ್ನೊಂಸರಿ ಎಲ್ಲಾ ಕೇಳ್ತೇನೆ, ಈಗ ವಿಷಯ ಹೇಳು
ಅದೇಕಳೆದ ಸಾರಿ ಅವರು ಊರ ಕಡೆ ಬಂದು ಚೆನ್ನೆ ಮಣೆ ,ಮೊರ ಚರಿಗೆ, ಕಲ್ಲು ಬಾನಿ, ಕಲ್ಮರಿಗೆ, ಸಾಂಬಾರ್ ದಾನಿ ಎಲ್ಲಾ ಫಟ ತೆಕ್ಕೊಂಡ್ ಬಂದಿದ್ದರಲ್ಲ
( ಈ ತಿಂಗಳ ಕೃಷಿ ಸಂಪದ ನೋಡಿ) ಅದರಲ್ಲಿ ಅಕ್ಕಿ ಮುಡಿ ಮತ್ತು ತಿರಿ ಫಟಕ್ಕೆ ಸಿಕ್ಕಿರಲಿಲ್ಲ, ಅದಕ್ಕೇ ಇನ್ನೋದ್ಸಾರಿ ಬೆಂಗ್ಳೂರಿಗೆ ಬಂದ್ರೆ ಬಾ ಅಂದಿರಲ್ಲೆ ಅವರನ್ನು ಕರೀಲಿಕ್ಕೇ  ಬಂದಿದ್ದೆ.
...???? ಪುಣ್ಯ ಮತ್ತೊಮ್ಮೆ ಕರೆವಾಣಿ ಮಾತಾಡಿತು.
"ಸೀನನ ಧರ್ಮ ಪತ್ನಿ!!!           ಮಿಸ್ ಅಲ್ಲಾ ಮಿಸ್ಡ್  ಕಾಲ್
ನಾನು ಕರೆ ಮಾಡಿದೆ
" ಅಣ್ಣಾ ಅವರು ಅಲ್ಲೇ ಇದ್ದಾರೇನು"  ಎಲಾ ಏನ್ ಪರ್ಫೆಕ್ಟ್ ಟೈಮಿಂಗ್!!!    ಕೊಟ್ಟೆ ಸೀನಂಗೆ
 ಸರಿ ಬಿಡು, ಅಯ್ತು ಕಣೆ ಅನ್ನುವುದು ಮಾತ್ರ ಗೊತ್ತಾಯ್ತು.
 "ಏನಂತೆ ಕಳೆದ ಸಾರಿ ಕೊಟ್ಟ ಪೌಡರ್ ಬೇಕಂತಾ?  "
ಯಾರೋ ದುಬಾಯಿಂದ ಬಂದವರು ಕೊಟ್ಟ ಮೂರ್ನಾಲ್ಕು ಪೌಡರ್ ಡಬ್ಬಿ ಇತ್ತು ಅದನ್ನೇ ಕೊಟ್ಟಿದ್ದೆ ಊರ ಕಡೆ ಮೊನ್ನೆ  ಹೋದಾಗ..
 "ಅದರ ಮಾತೆತ್ತಬೇಡ ಎಲ್ಲಾ .. ಅದೇ  ಡಬ್ಬೀದು... ಹರಿ ಕಥೆ!!  ಏನಾಯ್ತು? ಅವ್ಳ ಹತ್ರೇ ಕೇಳು"
ಅದಕ್ಕೂ ನನ್ನ ಕರೆವಾಣಿಯದ್ದೇ ಖರ್ಚು...
"ಅದೇ ಕಳೆದ ಸಾರಿ ಕೊಟ್ರಲ್ಲ ಎಲ್ಲಿಗೆ ಹೋಗೂದಾದ್ರೂ ಅದೇ ಪೌಡರ್ ಇವ್ರಿಗೆ, ಚವ್ಣಿ ಜಂಬ್ ನಂಗಂತೂ ಅದ್ನ್ ಕಂಡ್ರ್ ಆತಿಲ್ಲೆ.
ಹಾಕ್ಕಂಬ್ದ್ ಅಂದ್ರೆ ಮುಕ್ಕಾಲ್ ಪಾಲು ನೆಲಕ್ಕೆ ಕಾಲ್ ಭಾಗ ಎದಿಗೆ. ಕಾಲೂರಿದರೆ ಜೊಯ್ ಜಾರುದು. ಮೊನ್ನೆ ಬಿದ್ದ ನಾನು ಸುಧಾರ್ಸ್ಕಂಬಕೆ ಹದ್ನೈದ್ ದಿನ ಅಯ್ತ್."
"ಆಯ್ತು ನಾನು ಅವ್ನಿಗೆ ಹೇಳ್ತೇನೆ"
"ಎಲ್ಲಿ ಹೇಳ್ತೀರಿ? ನಿನ್ನೆ ಅವರು ನಿಮ್ಮಲ್ಲಿಗೆ ಬರುವಾಗ ಪುನಹ.....
ಬೆಡ್ರೂಮಲ್ಲಿ ಬೇಡ ಅಂತ ಬಾಥ್ ರೂಮಿನ ಬಾಗ್ಲ ಇದಿರು ಬೇಸನ್ ಇತ್ತಲ್ಲ ಅಲ್ಲಿಟ್ಟಿದ್ದೆ  ಆ ಪೌಡರ್ ಡಬ್ಬೀನ!!!  ಮತ್ತೆ ಅದೇ ಹಣೇ ಬರಹ. ಆ ಪೌಡರ್ ಮೇಲೆ ಕಾಲಿಟ್ಟು ಬಿದ್ದೆ.. ಈ ಸಾರಿ ಏಳಲಿಕ್ಕೆ ಅಂತ ಹಿಡಿದ ಬೇಸನ್ ಕೂಡಾ ನನ್ನ ಮೇಲೇ ಬಿದ್ದು..... ಪುಣ್ಯಕ್ಕೆ ಪಕ್ಕದ ಮನೆಯೋರು ಆಸ್ಪತ್ರೆಗೆ ಸೇರ್ಸಿದ್ರು
ಇನ್ನ್ ಜನ್ಮದಲ್ಲೂ ತರಬೇಡಿ ಅಂತ ಹೇಳೋಕೇ ಕರೆ ಮಾಡಿದ್ದು.."

 ಮರು ನಿಮಿಷದಲ್ಲಿ ಇಬ್ಬರೂ ಕೆಂಪೇಗೌಡ ನಿಲ್ದಾಣದ ಕಡೆ ....