Wednesday 13 July, 2011

ಸೀನನ ಮಾವಿನ ದಾಹ ಮತ್ತು ಸಿಟಿ ಆಸ್ಪತ್ರೆ

ಸೀನನ ಮಾವಿನ ದಾಹ ಮತ್ತು ಸಿಟಿ ಆಸ್ಪತ್ರೆ


ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ.
೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ.
ಅದರಲ್ಲಿ   ಅರ್ಧ ಆಗಲೇ ಖಾಲಿಯಾಗಿದೆ
ಆತನ ಎಲ್ಲಾ ಪಟಾಲಮ್ ಅಲ್ಲಿಯೇ ಇತ್ತು.ಯಾವುದೋ ಭಯಾನಕ ಪ್ರಯೋಗಶಾಲೆಯ ಮೇಜಿನ ಮೇಲಿದ್ದ ಸರೀಸೃಪದಂತೆ ಬಿದ್ದುಕೊಂಡಿದ್ದ.
ಅವನ ಪೂರಾ ಸಂಸಾರ ಅವನನ್ನು ಕೊಳ್ಳೆಯಂತೆ ನೋಡಿಕೊಳ್ಳುತ್ತಿತ್ತು.
ಕೈಯಿಂದ, ಮೂಗಿನಿಂದ ಹೊರಟ ಪೈಪುಗಳು ಇನ್ನೂ ಅಂತಹುದನ್ನು ಧೃಡಪಡಿಸುತ್ತಿದ್ದು, ತ್ಯಾಂಪ ಹಳೆಯ ಮತ್ತು ಹೊಸ ಕಾಲದ ಕೊಂಡಿಯಂತೆ ಭಾಸವಾಗುತ್ತಿದ್ದ.

ಎಲ್ಲಿ ಸೀನ...?   ಕೇಳಿದೆ

 ತ್ಯಾಂಪ ಪಕ್ಕದ ರೂಮು ತೋರಿಸಿದ, ಹೋಗಿ ನೋಡಿದೆ. ಇಡೀ ರೂಮೇ ಖಾಲಿ.. ಖಾಲಿ, ಹಾಗಿದ್ದರೆ ಎಲ್ಲಿಗೆ ಹೋಗಿರಬಹುದು ಈತ.?

ಹಾಗೇ  ವರಾಂಡದಲ್ಲಿ ನಡೆಯುತ್ತಲಿದ್ದೆ,  "ಭ್ರೂಣ ಹತ್ಯೆ ಮಹಾಪಾಪ", " ಈ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧಿಸಿದೆ" ಎಂಬೆಲ್ಲಾ ಬೋರ್ಡ ಕಾಣಿಸುತ್ತಿತ್ತು. ಅದರ ಪಕ್ಕದಲ್ಲಿಯೇ ಹೆಣ್ಣು ಮಗಳೊಬ್ಬಳು ತನ್ನ ಹದಿಹರೆಯದ ಮಗಳೊಂದಿಗೆ ಗಟಾಣಿ ನರ್ಸ ಜತೆ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದಳು, ಆ ಸಣ್ಣ ಹುಡುಗಿಯ ಮುಖ ಕಳೆಗುಂದಿತ್ತು. ಈಚೆ ತಿರುಗಿದೆ, ಪಕ್ಕದಲ್ಲಿಯೇ ಕೈಗಾಡಿಯೊಂದರಲ್ಲಿಯಾರನ್ನೋ ಹೊತ್ತೊಯ್ಯುತ್ತಿದ್ದರು. ಮುಖ ನೋಡಿ ಬೆಚ್ಚಿದೆ ಸೀನನಾ...? ಹೌದಾದರೆ ಅವನಿಗ್ಯಾಕೆ ಆಪರೇಶನ್..?

ಗುಂಡು ಕಲ್ಲಿನ ಹಾಗೆ ಇದ್ದವ ಇಂವ.  ಮೊನ್ನೆ ತಾನೇ ನಾನೂ ಅವನೂ ಮಾತಾಡಿದ್ದೆವು.ಸಂಪದ ಸಂಮಿಲನಕ್ಕೆ ಬರಲು ಹೇಳಿದರೆ ಸುತರಾಮ್ ಒಪ್ಪಲಿಲ್ಲ ಆತ, ಅದೆಲ್ಲಾ ನಿನಗೇ ಸರಿ ಪೇಟೆಯವ್ರಿಗೆ, ನೀವೇ ಕಂಡ್ಕಳಿ , ಊರ ಕಡೆ ಬಂದ್ರೆ ಹೇಳಿ ಅಂದಿದ್ದ. ಬೆಂಗಳೂರಿಗೆ ಬರ್ತೇನೆ ಎಂದಿದ್ದ, ತ್ಯಾಂಪನನ್ನು (ಸೀನನ ಹೆಂಡತಿಯ ದೂ.............ರದ ಅಣ್ಣ) ಆಸ್ಪತ್ರೆಗೆ ಸೇರಿಸಿದ್ದಾರೆ, ಅವನನ್ನು ನೋಡಲು ಬರುತ್ತಿರುವುದಾಗಿ ಹೇಳಿದ್ದ. ಅದೇ ಸಿಟಿ ಆಸ್ಪತ್ರೆಯಲ್ಲಿ "ಎಂತ ಆಯ್ತಾ ನಿನ್ನ ಭಾವಂಗೆ..?"


ಒಂದರ್ಥದಲ್ಲಿ ಸೀನನೇ ಕಾರಣ ತ್ಯಾಂಪನ ಆಸ್ಪತ್ರೆ ದರ್ಶನಕ್ಕೆ. ಇದಕ್ಕೆ ಕಾರಣ ಮಾವಿನ ಹಣ್ಣು ಮತ್ತು ಸೀನನ ಅವಿನಾಭಾವ ಸಂಭಂಧ. ಇದು ನಾನು ಅವನೂ ಚಿಕ್ಕವರಿರುವಾಗಿನಿಂದಲೇ ಆರಂಭವಾಗಿತ್ತು
ನಮ್ಮ ಹಳೆ ಶಾಲೆಯ ಪಕ್ಕ ಒಂದು ದೊಡ್ಡ ಮಾವಿನಮರವಿತ್ತು, ಅದರ ಹಣ್ಣೋ ಬಲು ರುಚಿ. ಮಳೆಗಾಲ ಬಂತೆಂದ್ರೆ ಗಾಳಿಗೆ ಬೀಳುವ ಹಣ್ಣುಗಳನ್ನು ಆಯ್ದುಕೊಳ್ಳಲು ನಮ್ಮಲ್ಲಿ, ಮಕ್ಕಳಲ್ಲಿ ಯಾವಾಗಲೂ ಜಗಳ.ಆಗಲೇ ನಾನು ಸೀನನೂ ಒಂದು ಒಪ್ಪಂದ ಮಾಡಿಕೊಂಡಿದ್ದೆವು.
ಶಾಲೆ ಬಿಡುವ ಸ್ವಲ್ಪ ಮೊದಲು ಏನಾದರೊಂದು ಸಬೂಬು ತೆಗೆದು ನಮ್ಮಿಬ್ಬರಲ್ಲಿ ಒಬ್ಬರು ಹೊರಗೆ ಹೋಗಿ ಮರದ ಹತ್ತಿರ ಇದ್ದು , ಕೆಳಗೆ ಬೀಳುವ ಎಲ್ಲಾ ಹಣ್ಣುಗಳನ್ನೂ ಆರಿಸಿಕೊಳ್ಳುತ್ತಿದ್ದೆವು, ಶಾಲೆ ಬಿಟ್ಟಮೇಲೆ ಹಂಚಿಕೊಳ್ಳುತ್ತಿದ್ದೆವು. ಅದನ್ನ ನಮ್ಮ ಮುಖ್ಯೋಪಾಧ್ಯಾಯರ ಮಗ ಕಂಡುಹಿಡಿದು ಹೇಳಿ ರಾಮಾಯಣ ಮಾಡಿದ್ದ, ಎಷ್ಟೋ ಸಾರಿ ಮಾವಿನ ಹಣ್ಣು ತಿಂದ ಸೀನ ನಿದ್ದೆ ಮಾಡುತ್ತ ಸಿಕ್ಕಿ ಬಿದ್ದು ಹೊಡೆತ ತಿಂದಿದ್ದ, ಪರೀಕ್ಷೆಗೆಂದು ಓದುವಾಗಲೂ  ಯಥೇಚ್ಚ ಮಾವಿನ ಹಣ್ಣು ತಿಂದು ಗೊರಕೆ ಹೊಡೆದು ನಾನೂ ಅವನೂ ನಮ್ಮ ನಮ್ಮ ಮನೆಯವರಿಂದ ಪೆಟ್ಟು ತಿಂದಿದ್ದೆವು.
ಈಗಲೂ ಅಷ್ಟ್ಟೇ ಮಾವಿನಹಣ್ಣು ಸೀನನ ವೀಕ್ನೆಸ್. ತ್ಯಾಂಪನಿಗೆ ಸೀನನೇ ಆದರ್ಶ ಪುರುಷ.

"ಎಂತ ಇಲ್ಯಾ, ಭಾವ ಅವ್ನ್ ಫ್ರೆಂಡೂ ಶಿವಾಜಿನಗರಕ್ಕೆ ಹೋಯ್ತಿದ್ರಂಬ್ರು",ತ್ಯಾಂಪನಿಗೆ ಆ ಅಕ್ಸಿಡೆಂಟ್  ಹೇಗಾಯ್ತು ಎನ್ನುವ ವಿವರಣೆ ಸೀನ ನನಗೆ ಕೊಡುತ್ತಿದ್ದ

, "ನಾನ್ ನಮ್ ಶಾಲಿಗೋಪತ್ತಿನ  ಕಥಿ ಅವನಿಗ್ ಹೇಳಿದ್ದೆ......    ",ಮೇಖ್ರಿ ಸರ್ಕಲ್ ನಿಂದ ಶಿವಾಜಿನಗರಕ್ಕೆ ಹೋಗುವ ರಸ್ತೆಯಲ್ಲಿ ,(ಇತ್ತೀಚೆಗೆ ರಸ್ತೆಯ ಪಕ್ಕದ ಎಲ್ಲಾ ಮರಗಳನ್ನೂ (ಅದರಲ್ಲಿ ಮಾವಿನ ಮರಗಳೂ ಇದ್ದುವು) ಹಾಗೇ ಬಿಟ್ಟು ಅಗಲೀಕರಣ ಮಾಡಿದ್ದರು),
ಮಾವಿನ ಮರವನ್ನು ನೋಡಿದ, ಆಗಲೇ ಗಾಳಿ ಮಳೆಯೂ ಶುರುವಾಗಿತ್ತು

"ಅಂವ ಕಲ್ ತಕಂಡ್ ಮರಕ್ಕ ಹೊಡ್ದ , ಅದ ತಪ್ಪಿ ಆಚಿ ಬದಿ ಮಿಲಿಟರಿಯರ್ ಮನಿಗ್ ಬಿತ್ತ್. ಮೇಜರ್ ಹೊರ್ಗೇ ತಿರ್ಗ್ ಕಂಡ್ ಇದ್ದ, ಅವ್ನ್ ಕೈಲಿದ್ದ ನಾಯಿ ಬಿಟ್ಟ!!! ಇಬ್ಬರು ಓಡೂಕ್ ಸುರು ಮಾಡ್ರಂಬ್ರ್, ರಸ್ತಿಮೇಲ್ ಬಪ್ಪ ಬೈಕಿಗ್ ಡ್ಯಾಷ್ ಹೊಡ್ದ್ ಬಿದ್ದ, ಅಷ್ಟೇ ಅದ್ರ ಸಾಕಿತ್ತ್.
ಅದೇ ನೋವ್ ತಕಂಡ್ ಮನಿಗ್ ಹೋದ್ರ,
ರಾತ್ರೆ ಅಟ್ಟದ ಮೇಲಿನಿಡ್ಲಿ ಅಟ್ಟ ತೆಗೂಕ್ ಹೋಯಿ, ಅತ್ತೆ ಮೇಲಿಂದ್ ಬೀಳ್ತಿದ್ರಂಬ್ರ, ಅವ್ರನ್ನ್ ಹಿಡುಕೋಯಿ ಇವ ಕೆಳ್ಗೆ ಇವ್ನ್ ಮೇಲ್ ಆ ಹಿಡಿಂಬಿ... ಆಯ್ತ್ ಅವ್ನ್ ಕಥಿ..."



ನಾನು ಕೌಂಟರಿನಲ್ಲಿ ಕೇಳಿದೆ, ಯಾರಿಗೆ ಆಪರೇಶನ್?
ಅಪೆಂಡಿಸೈಟಿಸ್ ೫೮ ವರ್ಷದ ವಿಕ್ರಮ್ ಅಂತ ಸರ್"
ಅವರ ಬೆಡ್/ ವಾರ್ಡ್ ನಂಬರ್ ಎಷ್ಟು?
ಒಂಭತ್ತು ಸರ್!!!
ಓಡಿದೆ  ಅಲ್ಲಿಗೆ, ಎಂಟರ ಪಕ್ಕದ್ದಕ್ಕೆ, ಅಲ್ಲಿ ಆ ಪ್ರಾಣಿ ಕಾಯ್ತಾ ಇದೆ ಆಪರೇಷನ್ಗೆ, ನಾನು ಅದಕ್ಕೇ ಬಂದ ಹಾಗೆ
ಹಾಗಾದರೆ ನಿಜವಾಗಿ ಆಪರೇಷನ್ ನಡೆಯ ಬೇಕಾದವರು ಇಲ್ಲಿದ್ದರೆ..?  ಯಾರಿಗೆ ಆಗ್ತಾ ಇದೆ ಆಪರೇಷನ್...................? ಸೀನ...?
ನನ್ನ ಎದೆ ಡವಡವ , ಸರಿ ಐದರ  ನಂತರ ಆರು ಇರಬೇಕಿತ್ತಲ್ಲಾ.. ಇಲ್ಲೂ ೯ ಇದೆ, ಸರಿಯಾಗಿ ನೋಡಿದಾಗ ಗೊತ್ತಾಯ್ತು ಆರರ ಮೇಲಿನ ಸ್ಕ್ರೂ ಕಳಚಿದ್ದು .
ಸೀದಾ ಓಟಿಗೆ ಓಡಿದೆ.

ಹರಸಾಹಸ ಮಾಡಿ ಸೀನನ ಹೊಟ್ಟೆ ಕೊಯ್ತ ನಿಲ್ಲಿಸಿದ್ದೆ.
ಇನ್ನೇನು ಪ್ರಯೋಗ ಶಾಲೆಯಲ್ಲಿನ ಕಪ್ಪೆ ತರ ಆಗಬೇಕಿದ್ದ ಸೀನ, ಸ್ವಲ್ಪದರಲ್ಲಿ ತಪ್ಪಿತು.

"ಎಂತದ್ದು ಮರಾಯಾ, ನಾನಲ್ಲ ಅಂಬ್ಕಾಯಿಲ್ಯನಾ ನಿಂಗೆ?" ಅಂದ್ರೆ ಬೆಬೆಬೆ ಅಂಬ ,
ವೈದ್ಯರು ಕೊಟ್ಟ ಸೂಜಿ ಮದ್ದಿನ ಪ್ರಭಾವ ಪಾಪ ಜಾಸ್ತಿಯೇ ಇತ್ತು.

ಶೀನ  ನನ್ನ ಮುಖ ನೋಡಿದ ಸನ್ನೆ ಮಾಡಿದ, ಇದರರ್ಥ ಕೂಡಲೇ ಜಾಗ ಖಾಲಿ ಮಾಡು ಅಂತ. ಇಲ್ಲಿಯೇ ಇದ್ದರೆ ತ್ಯಾಂಪನ ಜತೆ ಆತನೂ ಬಲಿಪಶು ಆಗೋದು ಬೇಡ  ಅಂತ, ಅವರಿಬ್ಬರ  ಹೆಂಡತಿಯರು ಮತ್ತು ಮಂಗಗಳನ್ನು ಕರೆದು ಕೊಂಡು ಹೊರಟೆ ತ್ಯಾಂಪನ  ಮನೆಯತ್ತ.....

No comments: